![](https://kannadadunia.com/wp-content/uploads/2018/12/HY20PADDYCROP.jpg)
ಬೆಂಗಳೂರು: ರೈತರಿಂದಲೇ ನೇರವಾಗಿ ಭತ್ತ ಖರೀದಿಗೆ ಆಹಾರ ನಿಗಮ ಚಿಂತನೆ ನಡೆಸಿದೆ. ಹೀಗೆ ಖರೀದಿಸಿದ ಭತ್ತವನ್ನು ಪಡಿತರ ವ್ಯವಸ್ಥೆ ಮೂಲಕ ಹಂಚಿಕೆ ಮಾಡಲು ಶೀಘ್ರವೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಈ ಕುರಿತಂತೆ ಯೋಜನೆ ರೂಪಿಸಿದ್ದು, ರೈತರಿಂದ ಭತ್ತ ಖರೀದಿಸಿ ಆಹಾರ ನಿಗಮದ ಮೂಲಕ ಪಡಿತರ ವ್ಯವಸ್ಥೆಯಡಿ ಹಂಚಿಕೆ ಮಾಡಲಾಗುವುದು ಎಂದು ಹೇಳಲಾಗಿದೆ.
ರಾಜ್ಯ ಕೃಷಿ ಬೆಲೆ ಆಯೋಗ ರೈತರಿಂದಲೇ ನೇರವಾಗಿ ಆಹಾರಧಾನ್ಯ ಖರೀದಿಸಿ ಪಡಿತರ ವ್ಯವಸ್ಥೆಯಡಿ ವಿತರಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಇದಕ್ಕೆ ಪೂರಕವಾಗಿ ರೈತರಿಂದ ಭತ್ತ ಖರೀದಿಸಿ ಪಡಿತರ ವ್ಯವಸ್ಥೆ ಮೂಲಕ ಹಂಚಿಕೆ ಮಾಡಲು ಯೋಜನೆ ರೂಪಿಸಲಾಗಿದೆ. ಈ ಯೋಜನೆ ಅನುಷ್ಠಾನಕ್ಕೆ ಸುಮಾರು 10 ಸಾವಿರ ಕೋಟಿ ರೂಪಾಯಿ ಬಂಡವಾಳ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ರಾಜ್ಯದಲ್ಲಿ ವಾರ್ಷಿಕ ಸುಮಾರು 59 ಲಕ್ಷ ಮೆಟ್ರಿಕ್ ಟನ್ ಭತ್ತ ಬಳೆಯುತ್ತಿದ್ದು, ಪಡಿತರ ವ್ಯವಸ್ಥೆಯ ಮೂಲಕ ಸರ್ಕಾರ ಬಡವರಿಗೆ ವಾರ್ಷಿಕ 29 ಲಕ್ಷ ಮೆಟ್ರಿಕ್ ಟನ್ ಅಕ್ಕಿ ವಿತರಿಸುತ್ತಿದೆ. ಪಡಿತರ ವ್ಯವಸ್ಥೆಯಡಿ ವಿತರಿಸಲು ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಸಲಾಗುತ್ತಿದೆ.
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಜ್ಯದ ರೈತರಿಂದ ಭತ್ತ ಖರೀದಿಸಿದರೆ ರೈತರಿಗೆ ಅನುಕೂಲವಾಗುತ್ತದೆ. ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ದರ ಸಿಗುತ್ತದೆ. ಸರ್ಕಾರಕ್ಕೆ ನೂರಾರು ಕೋಟಿ ರೂಪಾಯಿ ಉಳಿತಾಯವಾಗುತ್ತದೆ ಎನ್ನಲಾಗಿದ್ದು, ಯೋಜನೆಯ ಕುರಿತಾದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಲಾಗಿದೆ.