ಬೆಂಗಳೂರು: ಜೋಳ ಖರೀದಿಗೆ ವಿಧಿಸಿದ್ದ ನಿರ್ಬಂಧ ತೆರವುಗೊಳಿಸಲಾಗಿದೆ. ರೈತರು ಹೆಚ್ಚಿನ ಪ್ರಮಾಣದಲ್ಲಿ ಬೆಂಬಲ ಬೆಲೆ ಜೋಳ ಮಾರಾಟ ಮಾಡಲು ಅವಕಾಶ ನೀಡಲಾಗಿದೆ.
ಎಕರೆಗೆ 10 ಕ್ವಿಂಟಲ್ ನಂತೆ ಗರಿಷ್ಠ 20 ಕ್ವಿಂಟಲ್ ವರೆಗೆ ಬೆಂಬಲ ಬೆಲೆಯಡಿ ಜೋಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಜೋಳ ಬೆಳೆದ ರೈತರು ಈ ಬಗ್ಗೆ ಆಸಕ್ತಿ ತೋರಿಸಲಿಲ್ಲ. ತಾವು 50 – 100 ಕ್ವಿಂಟಲ್ ಜೋಳ ಬೆಳೆದರೆ ಸರ್ಕಾರ ಕೇವಲ 20 ಕ್ವಿಂಟಲ್ ಖರೀದಿಸುವುದು ಸರಿಯಲ್ಲ ಎಂದು ರೈತರಿಂದ ಆಕ್ಷೇಪ ವ್ಯಕ್ತವಾಗಿತ್ತು.
ಸರ್ಕಾರ ಎರಡು ಲಕ್ಷ ಮೆಟ್ರಿಕ್ ಟನ್ ಜೋಳ ಖರೀದಿಸುವ ಗುರಿ ಹೊಂದಿದ್ದು, ಒಂದು ತಿಂಗಳ ಕಾಲ ರೈತರು 10 ಸಾವಿರ ಮೆಟ್ರಿಕ್ ಟನ್ ಮಾತ್ರ ಮಾರಾಟ ಮಾಡಿದ್ದಾರೆ. ಹೀಗಾಗಿ 20 ಕ್ವಿಂಟಲ್ ಮಿತಿಯನ್ನು ತೆರೆವುಗೊಳಿಸಲಾಗಿದೆ. ಪ್ರತಿ ಕ್ವಿಂಟಲ್ ಬಿಳಿ ಜೋಳಕ್ಕೆ 2770 ರೂ. ಬೆಂಬಲ ಬೆಲೆ ನಿಗದಿ ಮಾಡಲಾಗಿದೆ. ಭತ್ತಕ್ಕೆ ಬೆಂಬಲ ಬೆಲೆ 100 ರೂ. ಹೆಚ್ಚಳ ಮಾಡಲಾಗಿದ್ದು, 2040 -2,260 ರೂ. ನಿಗದಿ ಮಾಡಲಾಗಿದೆ. ರಾಗಿಗೆ 206 ರೂ. ಹೆಚ್ಚಳ ಮಾಡಲಾಗಿದ್ದು, 3578 ರೂಪಾಯಿ ನಿಗದಿ ಮಾಡಲಾಗಿದೆ. ಜೋಳ ಖರೀದಿ ಮಿತಿ ತೆರವುಗೊಳಿಸಿದ್ದು, ಕೇಂದ್ರ ಸರ್ಕಾರ ನಿಗದಿಪಡಿಸಿದ 2 ಲಕ್ಷ ಮೆಟ್ರಿಕ್ ಸಂಗ್ರಹಣ ಗುರಿ ತಲುಪುವವರೆಗೆ ರೈತರಿಂದ ಜೋಳ ಖರೀದಿಸಲಾಗುವುದು. ರಾಗಿ, ಭತ್ತ ಖರೀದಿ ಮಿತಿ ಹಿಂದಿನಂತೆ ಇರಲಿದೆ ಎಂದು ಹೇಳಲಾಗಿದೆ.