ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ತನ್ನ ಗ್ರಾಹಕರಿಗೆ ಐಪಿಪಿಬಿ ಮೊಬೈಲ್ ಅಪ್ಲಿಕೇಶನ್ ಮೂಲಕ ಡಿಜಿಟಲ್ ಉಳಿತಾಯ ಖಾತೆ ತೆರೆಯುವ ಸೌಲಭ್ಯವನ್ನು ನೀಡ್ತಿದೆ. ಐಪಿಪಿಬಿ ಮೊಬೈಲ್ ಅಪ್ಲಿಕೇಶನ್ ಆಂಡ್ರಾಯ್ಡ್ ಫೋನ್ ನ ಪ್ಲೇ ಸ್ಟೋರ್ನಿಂದ ಅಥವಾ ಐಫೋನ್ ಆಪ್ ಸ್ಟೋರ್ನಿಂದ ಇದನ್ನು ಡೌನ್ಲೋಡ್ ಮಾಡಬಹುದು. 18 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ವ್ಯಕ್ತಿ, ಆಧಾರ್ ಮತ್ತು ಪ್ಯಾನ್ ಕಾರ್ಡ್ ಹೊಂದಿರುವವರು ಈ ಖಾತೆಯನ್ನು ತೆರೆಯಬಹುದು. ಮನೆಯಲ್ಲಿ ಕುಳಿತು ಆರಾಮವಾಗಿ ಈ ಖಾತೆ ತೆರೆಯಬಹುದು.
ಅಂಚೆ ಕಚೇರಿ ಖಾತೆದಾರರು ತಮ್ಮ ಐಪಿಪಿಬಿ ಮೊಬೈಲ್ ಅಪ್ಲಿಕೇಶನ್ ಬಳಸಿ ವಹಿವಾಟುಗಳನ್ನು ಸುಲಭವಾಗಿ ಮಾಡಬಹುದು. ಠೇವಣಿ ಇಡಲು, ಬ್ಯಾಲೆನ್ಸ್ ಚೆಕ್ ಮಾಡಲು, ಹಣವನ್ನು ವರ್ಗಾಯಿಸಲು ಮತ್ತು ಇತರ ಹಣಕಾಸು ವ್ಯವಹಾರಗಳಿಗೆ ಹತ್ತಿರದ ಅಂಚೆ ಕಚೇರಿಗೆ ಹೋಗಬೇಕಾಗಿಲ್ಲ. ಆರ್ಡಿ, ಸಾರ್ವಜನಿಕ ಭವಿಷ್ಯ ನಿಧಿ, ಸುಕನ್ಯಾ ಸಮೃದ್ಧಿ ಖಾತೆಗೂ ಈ ಅಪ್ಲಿಕೇಷನ್ ಮೂಲಕ ನೀವು ಹಣ ವರ್ಗಾವಣೆ ಮಾಡಬಹುದು.
ಮೊಬೈಲ್ ಫೋನ್ನಲ್ಲಿರುವ ಐಪಿಪಿಬಿ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ಗೆ ಹೋಗಿ ಓಪನ್ ಅಕೌಂಟ್ ಕ್ಲಿಕ್ ಮಾಡಬೇಕು. ಪ್ಯಾನ್ ಕಾರ್ಡ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು. ತ್ವರಿತ ಬ್ಯಾಂಕ್ ಖಾತೆಯನ್ನು ತೆರೆಯಲು ಲಿಂಕ್ ಮಾಡಿದ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಅದನ್ನು ನಮೂದಿಸಬೇಕು. ಪೋಷಕರ ಹೆಸರು, ಶೈಕ್ಷಣಿಕ ಅರ್ಹತೆ, ವಿಳಾಸ ಮತ್ತು ದಾಖಲಾತಿ ವಿವರಗಳಂತಹ ವೈಯಕ್ತಿಕ ಮಾಹಿತಿಯನ್ನು ನಮೂದಿಸಬೇಕು. ವಿವರಗಳನ್ನು ಭರ್ತಿ ಮಾಡಿದ ನಂತರ ಖಾತೆ ತೆರೆಯಲಾಗುತ್ತದೆ. ಡಿಜಿಟಲ್ ಉಳಿತಾಯ ಖಾತೆಯು 1 ವರ್ಷಕ್ಕೆ ಮಾತ್ರ ಮಾನ್ಯವಾಗಿರುತ್ತದೆ. ಖಾತೆಯನ್ನು ತೆರೆದ 1 ವರ್ಷದೊಳಗೆ ನೀವು ಖಾತೆಗೆ ಬಯೋಮೆಟ್ರಿಕ್ ದೃಢೀಕರಣವನ್ನು ಪೂರ್ಣಗೊಳಿಸಬೇಕು. ನಂತರ ಅದನ್ನು ಸಾಮಾನ್ಯ ಉಳಿತಾಯ ಖಾತೆಯಾಗಿ ಪರಿವರ್ತಿಸಲಾಗುತ್ತದೆ.
ಡಿಜಿಟಲ್ ಉಳಿತಾಯ ಖಾತೆ ತೆರೆಯುವಾಗ ನೆನಪಿಡುವ ಪ್ರಮುಖ ವಿಷಯಗಳೆಂದರೆ, ಖಾತೆಯನ್ನು ತೆರೆಯುವ ವ್ಯಕ್ತಿಯು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು. 12 ತಿಂಗಳೊಳಗೆ ಕೆವೈಸಿ ವಿಧಿವಿಧಾನಗಳನ್ನು ಪೂರ್ಣಗೊಳಿಸಬೇಕು. ಡಿಜಿಟಲ್ ಉಳಿತಾಯ ಖಾತೆಯನ್ನು ಸಾಮಾನ್ಯ ಉಳಿತಾಯ ಖಾತೆಗೆ ಅಪ್ಗ್ರೇಡ್ ಮಾಡಲಾಗುತ್ತದೆ. ಈ ಖಾತೆಯಲ್ಲಿ ಗರಿಷ್ಠ 2 ಲಕ್ಷ ರೂಪಾಯಿಗಳನ್ನು ಜಮಾ ಮಾಡಲು ಅನುಮತಿ ಇದೆ. ಖಾತೆ ತೆರೆದ 12 ತಿಂಗಳೊಳಗೆ ಕೆವೈಸಿ ಪೂರ್ಣಗೊಳ್ಳದಿದ್ದರೆ, ಖಾತೆಯನ್ನು ಮುಚ್ಚಲಾಗುತ್ತದೆ. ಕೆವೈಸಿ ಪೂರ್ಣಗೊಂಡ 12 ತಿಂಗಳೊಳಗೆ ಡಿಜಿಟಲ್ ಉಳಿತಾಯ ಖಾತೆಯನ್ನು ಲಿಂಕ್ ಮಾಡಬಹುದು.