ನವದೆಹಲಿ: ಅತಿವೃಷ್ಟಿ ಕಾರಣದಿಂದ ಈರುಳ್ಳಿ ಬೆಳೆ ಹಾಳಾಗಿದ್ದು ಪೂರೈಕೆಯಲ್ಲಿ ವ್ಯತ್ಯಯವಾಗಿದ್ದರಿಂದ ಬೆಲೆ ಗಗನಕ್ಕೇರಿದೆ.
ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದ ಈರುಳ್ಳಿ ಬರುತ್ತಿಲ್ಲ. ಹೀಗಾಗಿ ಈರುಳ್ಳಿ ಬೆಲೆ 100 ರೂಪಾಯಿ ಗಡಿದಾಟಿದ್ದು 150 ರೂ. ಆಸುಪಾಸಿನಲ್ಲಿದೆ. ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ. ಬೆಲೆ ಏರಿಕೆ ನಿಯಂತ್ರಣಕ್ಕೆ ಈಗಾಗಲೇ ಕ್ರಮ ಕೈಗೊಂಡಿರುವ ಸರ್ಕಾರ ದರ ಹೆಚ್ಚಳ ತಡೆಯಲು ಈರುಳ್ಳಿ ದಾಸ್ತಾನಿಗೆ ಲಗಾಮು ಹಾಕಲು ಮುಂದಾಗಿದೆ.
ಚಿಲ್ಲರೆ ಮತ್ತು ಸಗಟು ಮಾರಾಟಗಾರರಿಗೆ ಡಿಸೆಂಬರ್ 31 ರವರೆಗೆ ದಾಸ್ತಾನು ಮಿತಿ ಹಾಕಿದ್ದು, ಚಿಲ್ಲರೆ ಮಾರಾಟಗಾರರು 2 ಟನ್ ವರೆಗೆ, ಸಗಟು ಮಾರಾಟಗಾರರು 25 ಟನ್ ರವರೆಗೆ ಈರುಳ್ಳಿ ದಾಸ್ತಾನು ಮಾಡಬಹುದು. ಹೆಚ್ಚಿನ ಪ್ರಮಾಣದ ದಾಸ್ತಾನು ಮಾಡಿದಲ್ಲಿ ಅಧಿಕಾರಿಗಳು ನಿಗಾ ವಹಿಸಿ ಕ್ರಮ ಕೈಗೊಳ್ಳಲಿದ್ದಾರೆ.
ಭಾರೀ ಮಳೆಯ ಕಾರಣ ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿದಂತೆ ಹಲವೆಡೆ ಈರುಳ್ಳಿ ಬೆಳೆ ನಾಶವಾಗಿದೆ. ಇದರ ಪರಿಣಾಮವಾಗಿ ದೇಶದ ಬಹುತೇಕ ಎಲ್ಲಾ ಭಾಗಗಳಲ್ಲಿ ಈರುಳ್ಳಿ 150 ರೂ. ಆಸುಪಾಸಿನಲ್ಲಿದೆ. ಬೆಲೆ ನಿಯಂತ್ರಣಕ್ಕೆ ಮುಂದಾಗಿದ್ದ ಸರ್ಕಾರ ಆರಂಭಿಕ ಹಂತದಲ್ಲೇ ಆಮದು ನಿರ್ಬಂಧವನ್ನು ಸಡಿಲಗೊಳಿಸಿದ್ದು ಈಜಿಪ್ಟ್, ಇರಾನಿನಿಂದ ಈರುಳ್ಳಿ ಆಮದು ಮಾಡಿಕೊಂಡು ಸ್ಥಳೀಯ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಕಡಿಮೆ ಮಾಡಲು ಕ್ರಮ ಕೈಗೊಂಡಿದೆ. ಇದರೊಂದಿಗೆ ದಾಸ್ತಾನು ಚಿಲ್ಲರೆ ಮತ್ತು ಸಗಟು ಮಾರಾಟಗಾರರಿಗೆ ದಾಸ್ತಾನು ಮಿತಿ ಹೇರಲಾಗಿದೆ. ಇದರಿಂದಾಗಿ ಈರುಳ್ಳಿ ಬೆಲೆ ಕಡಿಮೆಯಾಗಬಹುದೆಂದು ಹೇಳಲಾಗಿದೆ.