ಬೆಂಗಳೂರು: ರಾಜ್ಯದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಈರುಳ್ಳಿ ಬೆಳೆ ಹಾನಿಯಾಗತೊಡಗಿದೆ. ಇನ್ನು ಮಾರುಕಟ್ಟೆಯಲ್ಲಿಗುಣಮಟ್ಟದ ಈರುಳ್ಳಿ ಪೂರೈಕೆ ಕೊರತೆ ಉಂಟಾಗಿದೆ.
ಇದರ ಪರಿಣಾಮ ಈರುಳ್ಳಿ ಬೆಲೆ ಗಗನಕ್ಕೇರಿದ್ದು ಕೆಜಿಗೆ 75 ರೂ. ವರೆಗೂ ತಲುಪಿದೆ. ಇದರಿಂದಾಗಿ ಗ್ರಾಹಕರು ಕಂಗಾಲಾಗಿ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆ ಇನ್ನೂ ಹೆಚ್ಚಾಗಬಹುದು ಎಂದು ಹೇಳಲಾಗಿದೆ.
ಬೆಂಗಳೂರಿನ ಬಹುತೇಕ ಮಾರುಕಟ್ಟೆ, ಬೀದಿ ವ್ಯಾಪಾರಿಗಳ ಬಳಿ, ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಹೆಚ್ಚಾಗಿದೆ. ಹಾಪ್ ಕಾಮ್ಸ್ ನಲ್ಲಿ ಕೆಜಿಗೆ 75 ರೂ. ದರ ಇದೆ. ಈರುಳ್ಳಿ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದು ಮತ್ತು ಅತಿವೃಷ್ಟಿಯಿಂದ ಬೆಳೆ ನೆಲಕಚ್ಚಿದ ಪರಿಣಾಮ ಈರುಳ್ಳಿ ದರ ಹೆಚ್ಚಾಗತೊಡಗಿದೆ ಎಂದು ಹೇಳಲಾಗಿದೆ.
ಕಳೆದ ವರ್ಷ ಈರುಳ್ಳಿ ದರ ಕೆಜಿಗೆ 100 ರ ಗಡಿದಾಟಿ 200 ರೂ. ಸಮೀಪಕ್ಕೆ ತಲುಪಿತ್ತು. ಈಗ ಮಳೆಯ ಪರಿಣಾಮ ಹಸಿ ಈರುಳ್ಳಿ ಮಾರುಕಟ್ಟೆಗೆ ಬರುತ್ತಿದೆ. ಆದರೆ ಇದು ಬೇಗನೆ ಕೊಳೆಯುವ ಕಾರಣ ದಾಸ್ತಾನು ಮಾಡಲು ಸಾಧ್ಯವಾಗುತ್ತಿಲ್ಲ. ಗುಣಮಟ್ಟದ ಈರುಳ್ಳಿಗೆ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಯಾಗಿದೆ ಎನ್ನಲಾಗಿದೆ.