ಬೆಂಗಳೂರು: ಅತಿವೃಷ್ಟಿಯ ಕಾರಣ ಈರುಳ್ಳಿ ಬೆಳೆ ಹಾಳಾಗಿದ್ದು ಪೂರೈಕೆಯಲ್ಲಿ ವ್ಯತ್ಯಯ ಉಂಟಾದ ಕಾರಣ ಈರುಳ್ಳಿ ಬೆಲೆ ಗಗನಕ್ಕೇರಿದೆ.
ಈರುಳ್ಳಿ ದರ ಕೆಜಿಗೆ 120 ರೂಪಾಯಿವರೆಗೂ ಮಾರಾಟವಾಗುತ್ತಿದ್ದು ಗ್ರಾಹಕರು ಕಂಗಾಲಾಗಿ ಹೋಗಿದ್ದಾರೆ. ಮುಂಬೈ, ಚೆನ್ನೈನಲ್ಲಿಯೂ ಈರುಳ್ಳಿ ದರ ಶತಕ ಬಾರಿಸಿದ್ದು, 150 ರೂಪಾಯಿವರೆಗೂ ಮಾರಾಟವಾಗುತ್ತಿದೆ.
ಈರುಳ್ಳಿ, ಬೆಳೆದ ರೈತರಿಗೂ ಕಣ್ಣೀರು ತರಿಸಿದೆ. ಅಡುಗೆ ಮನೆಯ ಅಗತ್ಯ ವಸ್ತುಗಳಲ್ಲಿ ಒಂದಾದ ಈರುಳ್ಳಿ ಬೆಲೆ ಗಗನಕ್ಕೇರಿರುವುದು ಬಡ, ಮಧ್ಯಮ ವರ್ಗದವರಿಗೆ ನುಂಗಲಾರದ ತುತ್ತಾಗಿದೆ. ಕೊರೊನಾಘಾತದ ನಡುವೆ ಜನರಿಗೆ ಈರುಳ್ಳಿ ಕಣ್ಣೀರು ತರಿಸುತ್ತಿದೆ.
ಕೆಜಿಗೆ 100 ರೂಪಾಯಿ ಗಡಿದಾಟಿದ ಈರುಳ್ಳಿ ಬೆಲೆ ಕೇಳಿ ಗ್ರಾಹಕರು ಕಂಗಾಲಾಗಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಅತಿವೃಷ್ಟಿಯಿಂದಾಗಿ ಈರುಳ್ಳಿ ಬೆಳೆ ನಾಶವಾಗಿದೆ. ಬೆಲೆ ಇದ್ದರೂ ರೈತರ ಬಳಿ ಬೆಳೆ ಇಲ್ಲದಂತಾಗಿದೆ. ರಾಜ್ಯದ ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ರಾಯಚೂರು, ವಿಜಯಪುರ, ಧಾರವಾಡ-ಹುಬ್ಬಳ್ಳಿ ಭಾಗದಲ್ಲಿ ಅಪಾರ ಪ್ರಮಾಣದ ಈರುಳ್ಳಿ ಹಾನಿಯಾಗಿದ್ದು ಮಾರುಕಟ್ಟೆಗೆ ಈರುಳ್ಳಿ ಪೂರೈಕೆಯಾಗುತ್ತಿಲ್ಲ. ಮಹಾರಾಷ್ಟ್ರದಲ್ಲಿ ಈರುಳ್ಳಿ ದಾಸ್ತಾನಿಗೆ ಬ್ರೇಕ್ ಬಿದ್ದಿದ್ದು ಬೆಲೆ ಗಗನಕ್ಕೇರತೊಡಗಿದೆ. ಮುಂಬೈ, ಪೂನಾ, ಚೆನ್ನೈನಲ್ಲಿ ಈರುಳ್ಳಿ ಶತಕ ಬಾರಿಸಿ 150 ರೂ. ಗಡಿ ದಾಟುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.