ಮಳೆಯ ಅನಿಶ್ಚಿತತೆ ನಡುವೆ ಕಷ್ಟಪಟ್ಟು ಬೆಳೆದ ಈರುಳ್ಳಿಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದಂತಾಗಿ ರೈತರೊಬ್ಬರು ನಾಲ್ಕು ಕ್ವಿಂಟಲ್ ಈರುಳ್ಳಿ ಮಾರಾಟ ಮಾಡಿ ಕೇವಲ 8 ರೂಪಾಯಿ ಲಾಭ ಗಳಿಸಿದ್ದಾರೆ. ದಿಢೀರ್ ಬೆಲೆ ಕುಸಿತದಿಂದಾಗಿ ಈರುಳ್ಳಿ ಬೆಳೆಗಾರರಿಗೆ ಬರಸಿಡಿಲು ಬಡಿದಂತಾಗಿದೆ.
ಹೊಲ ಉಳುಮೆ ಮಾಡಿ, ಬೀಜ ಗೊಬ್ಬರ ಹಾಕಿ ವರ್ಷ ಪೂರ್ತಿ ದುಡಿದು ಬೆಳೆದ ಈರುಳ್ಳಿಯನ್ನು ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಾಟ ಮಾಡಬೇಕೆಂದುಕೊಂಡಿದ್ದ ಗದಗ ತಾಲೂಕಿನ ತಿಮ್ಮಾಪುರ ಗ್ರಾಮದ ರೈತ ಪವಾಡೆಪ್ಪ ಹಳ್ಳಿಕೇರಿ 4 ಕ್ವಿಂಟಲ್ ಈರುಳ್ಳಿ ಮಾರಾಟ ಮಾಡಿ 8 ರೂಪಾಯಿ ಲಾಭಗಳಿಸಿದ್ದಾರೆ.
ಬೆಂಗಳೂರಿನ ಯಶವಂತಪುರ ಮಾರುಕಟ್ಟೆಗೆ ಮಾರಾಟ ಮಾಡಲು ಅವರು ನಾಲ್ಕು ಕ್ವಿಂಟಾಲ್ ಈರುಳ್ಳಿ ತಂದಿದ್ದಾರೆ. ಆದರೆ, ದಿಢೀರ್ ದರ ಕುಸಿತವಾಗಿದ್ದು, ಒಂದು ಕ್ವಿಂಟಲ್ ಗೆ 100 ರೂಪಾಯಿಯಂತೆ ಮಾರಾಟವಾಗಿ ನಾಲ್ಕು ಕ್ವಿಂಟಾಲ್ 10 ಕೆಜಿ ಈರುಳ್ಳಿಗೆ 410 ರೂಪಾಯಿ ಬಿಲ್ ಆಗಿದೆ.
ಲಾರಿ ಬಾಡಿಗೆ 377 ರೂ., ಹಮಾಲಿ ಖರ್ಚು 27 ರೂ. ಇವುಗಳನ್ನೆಲ್ಲ ತೆಗೆದು ಪವಾಡೆಪ್ಪ ಅವರಿಗೆ ಕೇವಲ 8 ರೂಪಾಯಿ 36 ಪೈಸೆ ಲಾಭ ಸಿಕ್ಕಿದೆ. ಹೀಗೆ ದಿಢೀರ್ ಈರುಳ್ಳಿ ಈ ಬೆಲೆ ಕುಸಿತದಿಂದ ಕಂಗಾಲಾದ ರೈತರು ಸರ್ಕಾರ ಮಧ್ಯಪ್ರವೇಶಿಸಿ ಈರುಳ್ಳಿಗೆ ಸೂಕ್ತ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.