ಬೆಂಗಳೂರು: ಶತಕದ ಗಡಿ ದಾಟಿ ಕೆಜಿಗೆ 120 ರಿಂದ 130 ರೂ.ವರೆಗೂ ಮಾರಾಟವಾಗಿದ್ದ ಈರುಳ್ಳಿ ದರದಲ್ಲಿ ಗಣನೀಯ ಇಳಿಕೆಯಾಗಿದೆ. ದಾಸ್ತಾನು ಮಾಡಲಾಗಿದ್ದ ಈರುಳ್ಳಿ ಮಾರುಕಟ್ಟೆಗೆ ಬಂದ ಪರಿಣಾಮ ಈರುಳ್ಳಿ ಬೆಲೆ ಕಡಿಮೆಯಾಗಿದೆ.
ಶತಕದ ಗಡಿ ದಾಟಿದ್ದ ಈರುಳ್ಳಿ ದರ ಕೇಳಿ ಗ್ರಾಹಕರು ಕಂಗಾಲಾಗಿದ್ದರು. ಎರಡು ದಿನಗಳಿಂದ ಬೆಲೆ ಕಡಿಮೆಯಾಗತೊಡಗಿದ್ದು, ಸಗಟು ದರದಲ್ಲಿ ಗುಣಮಟ್ಟದ ಈರುಳ್ಳಿ ಕೆಜಿಗೆ 90 ರೂಪಾಯಿಯಿಂದ 60 ರೂಪಾಯಿವರೆಗೆ ಇಳಿಕೆಯಾಗಿದೆ.
ಕೇಂದ್ರ ಸರ್ಕಾರ ಈರುಳ್ಳಿ ದಾಸ್ತಾನು ಮೇಲೆ ಮಿತಿ ಹೇರಿ ನಿಗಾ ವಹಿಸುವುದಾಗಿ ಎಚ್ಚರಿಕೆ ನೀಡಿತ್ತು. ಇದರಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಮಾರುಕಟ್ಟೆಗೆ ಬಂದಿದೆ. ಅತಿವೃಷ್ಟಿಯಿಂದಾಗಿ ಈರುಳ್ಳಿ ಬೆಳೆ ಹಾಳಾಗಿದೆ. ಉಳಿದ ಹೊಸ ಬೆಳೆ ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ. ಗೋದಾಮುಗಳಲ್ಲಿ ಸಂಗ್ರಹಿಸಿಡಲಾಗಿದ್ದ ಈರುಳ್ಳಿ ಮಾರುಕಟ್ಟೆಗೆ ಬಂದಿರುವುದರಿಂದ ದರ ಕಡಿಮೆಯಾಗಿದೆ.
ಯಶವಂತಪುರ ಮಾರುಕಟ್ಟೆಯಲ್ಲಿ ಅತ್ಯುತ್ತಮ ಗುಣಮಟ್ಟದ ಈರುಳ್ಳಿಗೆ 60 ರಿಂದ 70 ರೂಪಾಯಿ ದರ ಇದೆ. ಅದೇ ರೀತಿ ಉತ್ತಮ, ಮಧ್ಯಮ, ಸಾಧಾರಣ ಈರುಳ್ಳಿ ದರ ಕೆಜಿಗೆ 50 ರಿಂದ 60 ರೂ., 15 ರಿಂದ 40 ರೂ.ವರೆಗೆ ಮಾರಾಟವಾಗ್ತಿದೆ ಎನ್ನಲಾಗಿದೆ.