ಬೆಂಗಳೂರು: ಈರುಳ್ಳಿ ದರ ದುಬಾರಿಯಾದ ಹಿನ್ನೆಲೆಯಲ್ಲಿ ನಾಫೆಡ್ ಮೂಲಕ ಕೇಂದ್ರ ಸರ್ಕಾರ ಕಡಿಮೆ ಬೆಲೆಗೆ ಈರುಳ್ಳಿ ಮಾರಾಟ ಮಾಡುತ್ತಿದೆ. ಕೆಜಿಗೆ 25 ರೂ. ದರದಲ್ಲಿ ಈರುಳ್ಳಿ ಮಾರಾಟ ಮಾಡುತ್ತಿದ್ದು, ಜನ ಮುಗಿಬಿದ್ದು ಖರೀದಿಸಿದ್ದಾರೆ.
ಈರುಳ್ಳಿ ಬೆಲೆ ಹೆಚ್ಚಳವಾಗಿರುವುದರಿಂದ ಭಾರತ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ(ನಾಫೆಡ್) ಬೆಂಗಳೂರಿನ ವಿವಿಧೆಡೆ ಕೆಜಿಗೆ 25 ರೂ.ನಂತೆ ಮೊಬೈಲ್ ವ್ಯಾನ್ ಮೂಲಕ ಈರುಳ್ಳಿ ಮಾರಾಟ ಮಾಡುತ್ತಿದೆ.
ಮಾರುಕಟ್ಟೆಯಲ್ಲಿ ಕೆಜಿಗೆ 75 ರೂ.ವರೆಗೆ ಈರುಳ್ಳಿ ದರ ಇದ್ದು, 25 ರೂ. ಬೆಲೆಯ ಈರುಳ್ಳಿಯನ್ನು ಖರೀದಿಸಲು ಜನ ಮುಗಿಬಿದ್ದಿದ್ದಾರೆ. ಮಹಾರಾಷ್ಟ್ರದ ನಾಸಿಕ್ ನಿಂದ ನಾಫೆಡ್ ಈರುಳ್ಳಿಯನ್ನು ರಾಜ್ಯಕ್ಕೆ ಕಳುಹಿಸುತ್ತಿದ್ದು, ಸಗಟು ರೂಪದಲ್ಲಿ ಬರುವ ಈರುಳ್ಳಿಯನ್ನು 2 ಕೆಜಿ ಬ್ಯಾಗ್ ನಂತೆ ಸಿದ್ಧಪಡಿಸಿ ಮಾರಾಟ ಮಾಡಲಾಗುತ್ತಿದೆ. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ.
ಯಶವಂತಪುರ ಮಾರುಕಟ್ಟೆಗೆ ಈರುಳ್ಳಿ ಪೂರೈಕೆ ಹೆಚ್ಚಾಗಿದ್ದು, ಸಗಟು ದರ ಇಳಿಮುಖವಾಗಿದೆ. ಕ್ವಿಂಟಾಲ್ 6 ಸಾವಿರ ರೂ.ವರೆಗೂ ತಲುಪಿದ್ದ ಈರುಳ್ಳಿ ದರ ಸೋಮವಾರ 2500 ರಿಂದ 5000 ರೂ. ವರೆಗೆ ಮಾರಾಟವಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿಯೂ ಬೆಲೆ ಇಳಿಕೆಯಾಗಲಿದೆ ಎಂದು ಹೇಳಲಾಗಿದೆ.