ಬೆಂಗಳೂರು: ಕಳೆದ ವಾರದಿಂದ ದಿನೇ ದಿನೇ ಏರುಗತಿಯಲ್ಲಿ ಸಾಗುತ್ತಿರುವ ಈರುಳ್ಳಿ ದರ ಶತಕ ಬಾರಿಸಿದೆ. ಹುಳಿಯಾರಿನಲ್ಲಿ ಭಾನುವಾರ ಕೆಜಿಗೆ 100 ರೂಪಾಯಿಗೆ ಈರುಳ್ಳಿ ಮಾರಾಟವಾಗಿದೆ.
ಮಳೆ ಕೊರತೆಯಿಂದಾಗಿ ಈರುಳ್ಳಿ ಬೆಳೆ ಕುಂಠಿತವಾಗಿದ್ದು, ಪೂರೈಕೆಯಲ್ಲಿ ವ್ಯತ್ಯವಾಗಿದ್ದರಿಂದ ಕ್ವಿಂಟಾಲ್ ಈರುಳ್ಳಿ ದರ 6000 ರೂ. ಇದೆ. ಚಿಲ್ಲರೆ ಮಾರಾಟದಲ್ಲಿ ಕೆಜಿಗೆ 100 ರೂಪಾಯಿಗೆ ಏರಿಕೆಯಾಗಿದೆ. ಹುಳಿಯಾರು ಈರುಳ್ಳಿ ಹರಾಜು ಕೇಂದ್ರದಲ್ಲಿ ಭಾನುವಾರ ದೊಡ್ಡ ಗಾತ್ರದ ಉತ್ತಮ ಈರುಳ್ಳಿ 70 -100 ರೂ., ಮಧ್ಯಮ ಗಾತ್ರದ ಈರುಳ್ಳಿ 50 ರೂ., ಚಿಕ್ಕ ಗಾತ್ರದ ಈರುಳ್ಳಿ 40 ರೂ. ದರದಲ್ಲಿ ಮಾರಾಟವಾಗಿದೆ. ಬಿಜಾಪುರ ಈರುಳ್ಳಿ 80 ರಿಂದ 100 ರೂ.ಗೆ ರಿಟೇಲ್ ದರದಲ್ಲಿ ಮಾರಾಟವಾಗಿದೆ.
ವಿಜಯಪುರ ಜಿಲ್ಲೆಯ ಗೊಳಸಂಗಿ ಸಮೀಪದ ಕೂಡಗಿ ಎಪಿಎಂಸಿಯಲ್ಲಿ ಶನಿವಾರ ಸಂತೆಯಲ್ಲಿ ಈರುಳ್ಳಿ ದರ ಕ್ವಿಂಟಾಲ್ ಗೆ 10,000 ರೂ. ಗಡಿ ದಾಟಿದೆ. ಕೆಲವು ರೈತರು ಇನ್ನೂ ಬೆಲೆ ಏರಿಕೆ ಆಗಬಹುದು ಎಂದು ಮಾರಾಟಕ್ಕೆ ತಂದಿದ್ದ ಈರುಳ್ಳಿ ವಾಪಸ್ ತೆಗೆದುಕೊಂಡು ಹೋಗಿದ್ದಾರೆ.