ನವದೆಹಲಿ: ಸ್ಮಾರ್ಟ್ ಫೋನ್ ಗಳು ಮತ್ತು ಟ್ಯಾಬ್ಲೆಟ್ ಗಳು ಸೇರಿದಂತೆ ವಿವಿಧ ಸಾಧನಗಳಿಗೆ ಒಂದೇ ರೀತಿಯ ಚಾರ್ಜರ್ ಅಳವಡಿಕೆ ಕಡ್ಡಾಯ ಮಾಡಲು ಸರ್ಕಾರ ಚಿಂತನೆ ನಡೆಸಿದೆ.
ಈ ಬಗ್ಗೆ ಚರ್ಚಿಸಲು ಆಗಸ್ಟ್ 17 ರಂದು ಮಹತ್ವದ ಸಭೆ ಕರೆಯಲಾಗಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಭಾರತದಲ್ಲಿ ಬಹು ಚಾರ್ಜರ್ ಗಳ ಬಳಕೆಯನ್ನು ಕೊನೆಗೊಳಿಸುವ ಸಾಧ್ಯತೆಯನ್ನು ನಿರ್ಣಯಿಸಲು ಮತ್ತು ಇ-ತ್ಯಾಜ್ಯವನ್ನು ತಡೆಗಟ್ಟುವುದರ ಜೊತೆಗೆ ಗ್ರಾಹಕರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಮೊಬೈಲ್ ತಯಾರಕರು ಮತ್ತು ವಲಯ-ನಿರ್ದಿಷ್ಟ ಸಂಸ್ಥೆಗಳೊಂದಿಗಿನ ಸಭೆಯನ್ನು ನಿಗದಿಪಡಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇತ್ತೀಚೆಗೆ, ಯುರೋಪಿಯನ್ ಯೂನಿಯನ್ 2024 ರ ವೇಳೆಗೆ ಸಣ್ಣ ಎಲೆಕ್ಟ್ರಾನಿಕ್ ಸಾಧನಗಳಿಗೆ USB-C ಪೋರ್ಟ್ ಸಾಮಾನ್ಯ ಚಾರ್ಜಿಂಗ್ ಮಾನದಂಡವನ್ನು ಅಳವಡಿಸಿಕೊಳ್ಳುವುದಾಗಿ ಘೋಷಿಸಿತು. US ನಲ್ಲಿಯೂ ಇದೇ ರೀತಿಯ ಬೇಡಿಕೆಯಿದೆ.
“ಕಂಪನಿಗಳು ಯುರೋಪ್ ಮತ್ತು ಯುಎಸ್‌ನಲ್ಲಿ ಸೇವೆ ಸಲ್ಲಿಸಬಹುದಾದರೆ, ಅವರು ಭಾರತದಲ್ಲಿ ಅದನ್ನು ಏಕೆ ಮಾಡಬಾರದು? ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್ ಗಳಂತಹ ಪೋರ್ಟಬಲ್ ಎಲೆಕ್ಟ್ರಾನಿಕ್ ಸಾಧನಗಳು ಸಾಮಾನ್ಯ ಚಾರ್ಜರ್ ಅನ್ನು ಹೊಂದಿರಬೇಕು” ಎಂದು ಅಧಿಕಾರಿ ತಿಳಿಸಿದರು.
ಪ್ರಸ್ತುತ, ವಿವಿಧ ಉಪಕರಣಗಳಿಗೆ ವಿವಿಧ ಚಾರ್ಜರ್ ಗಳಿವೆ. ಗ್ರಾಹಕರು ಪ್ರತಿ ಬಾರಿ ಹೊಸ ಸಾಧನವನ್ನು ಖರೀದಿಸಿದಾಗ ಪ್ರತ್ಯೇಕ ಚಾರ್ಜರ್ ಖರೀದಿಸಬೇಕಿದೆ. ಇದರ ಬದಲು. ಎಲ್ಲಾ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಒಂದೇ ಚಾರ್ಜರ್ ಇರುವಂತೆ ಮಾಡಲಾಗುವುದು ಎನ್ನಲಾಗಿದೆ.