ಬೆಂಗಳೂರು: ಹಳೆಯ ವಾಹನ ಬಳಕೆ ಶುಲ್ಕ ಏರಿಕೆಗೆ ಹೈಕೋರ್ಟ್ ತಡೆ ನೀಡಿದೆ. ಕೇಂದ್ರ ಸರ್ಕಾರ ಹಳೆಯ ವಾಹನ ಬಳಕೆ ನವೀಕರಣದ ಮೇಲೆ ಹೆಚ್ಚುವರಿ ಶುಲ್ಕ ಮತ್ತು ದಂಡ ವಿಧಿಸುವ ಅಧಿಸೂಚನೆ ಹೊರಡಿಸಿದ್ದು, ಇದಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಕರ್ನಾಟಕ ಲಾರಿ ಮಾಲೀಕರ ಸಂಘದ ಒಕ್ಕೂಟದಿಂದ ಕೇಂದ್ರದ ಅಧಿಸೂಚನೆಯನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯಪೀಠ ಕೇಂದ್ರ ಸರ್ಕಾರದ ಅಧಿಸೂಚನೆಗೆ ಮಧ್ಯಂತರ ತಡೆ ನೀಡಿದೆ.
ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅರ್ಜಿದಾರರ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗಬಾರದು ಎಂದು ನ್ಯಾಯಪೀಠ ಆದೇಶಿಸಿದ್ದು ವಿಚಾರಣೆಯನ್ನು ಮುಂದೂಡಿದೆ.
ಕೇಂದ್ರದ ಅಧಿಸೂಚನೆಯ ಪ್ರಕಾರ 15 ವರ್ಷಗಳಿಗೂ ಮೇಲ್ಪಟ್ಟ ವಾಹನಗಳ ಮೇಲೆ ಏಪ್ರಿಲ್ 1 ರಿಂದ ಅನ್ವಯವಾಗುವಂತೆ ಹೆಚ್ಚುವರಿ ಶುಲ್ಕ ಮತ್ತು ದಂಡ ವಿಧಿಸಲಾಗಿದೆ.
15 ವರ್ಷ ಮೇಲ್ಪಟ್ಟ ಕಾರ್ ಗಳ ಪರವಾನಿಗೆ ನವೀಕರಣ ಶುಲ್ಕವನ್ನು 600 ರೂ.ನಿಂದ 5 ಸಾವಿರ ರೂಪಾಯಿಗೆ ಏರಿಕೆ ಮಾಡಲಾಗಿದೆ. ದ್ವಿಚಕ್ರವಾಹನಗಳ ಶುಲ್ಕವನ್ನು 300 ರೂ.ನಿಂದ 1000 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. 15 ವರ್ಷ ಮೇಲ್ಪಟ್ಟ ಬಸ್, ಟ್ರಕ್ ಗಳ ಸಾಮರ್ಥ್ಯ ದೃಢೀಕರಣ ನವೀಕರಣ ಶುಲ್ಕ 1500 ರೂ.ನಿಂದ 12,500 ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ.