ಬೆಂಗಳೂರು: ಓಲಾ, ಉಬರ್ ಕಂಪನಿಗಳಿಂದ ದುಪ್ಪಟ್ಟು ಹಣ ವಸೂಲಿ ಆರೋಪ ಹಿನ್ನೆಲೆಯಲ್ಲಿ ಓಲಾ, ಉಬರ್ ದರ ನಿಗದಿ ಬಗ್ಗೆ ಇಂದು ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತೆ ಸಭೆ ಕರೆದಿದ್ದಾರೆ.
ಸಾರಿಗೆ ಇಲಾಖೆಯ ಕಾರ್ಯದರ್ಶಿ ಎನ್.ವಿ. ಪ್ರಸಾದ್ ನೇತೃತ್ವದಲ್ಲಿ ಸಭೆ ನಡೆಸಲಾಗುವುದು. ಮಧ್ಯಾಹ್ನ 3 ಗಂಟೆಗೆ ಶಾಂತಿನಗರ ಸಾರಿಗೆ ಇಲಾಖೆ ಕಚೇರಿಯಲ್ಲಿ ಸಭೆ ನಡೆಯಲಿದೆ.
ಆಟೋ ಚಾಲಕರು, ಓಲಾ, ಉಬರ್ ಕಂಪನಿ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಾಗುವುದು. ಈಗಾಗಲೇ ಅಧಿಕಾರಿಗಳು ಎರಡು ಬಾರಿ ನಡೆಸಿದ್ದ ಸಭೆ ಕಾಟಾಚಾರಕ್ಕೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.
ಹೈಕೋರ್ಟ್ ನಿಂದ ಸಭೆ ನಡೆಸಿ ದರ ನಿಗದಿ ಮಾಡಲು ಸೂಚನೆ ನೀಡಲಾಗಿದ್ದು, ಹೊಸ ದರ ನಿಗದಿ ಕುರಿತಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತೆ ಸಭೆ ಕರೆದಿದ್ದಾರೆ. ಸದ್ಯ 2 ಕಿಮೀಗೆ 30 ರೂಪಾಯಿ ದರ ನಿಗದಿ ಮಾಡಲಾಗಿದೆ. ಸಾರಿಗೆ ಇಲಾಖೆ ವತಿಯಿಂದ ಇದೀಗ ಎರಡು ಕಿಲೋಮೀಟರ್ ಗೆ 40 ರಿಂದ 50 ರೂಪಾಯಿ ದರ ನಿಗದಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.