ನವದೆಹಲಿ: ಖಾದ್ಯ ತೈಲಗಳ ಬೆಲೆ ನಿಯಂತ್ರಣದ ಉದ್ದೇಶದಿಂದ ಕೇಂದ್ರ ಸರ್ಕಾರ ತಾಳೆ ಎಣ್ಣೆ, ಸೋಯಾ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಗಳ ಮೇಲಿನ ಆಮದು ಸುಂಕ ಇಳಿಕೆ ಮಾಡಿದೆ.
ಶನಿವಾರದಿಂದಲೇ ಜಾರಿಗೆ ಬರುವಂತೆ ಸೂರ್ಯಕಾಂತಿ ಎಣ್ಣೆ, ತಾಳೆಎಣ್ಣೆ, ಸೋಯಾ ಎಣ್ಣೆ ಮೇಲಿನ ಆಮದು ಸುಂಕವನ್ನು ಶೇಕಡ 24.75 ಕ್ಕೆ ಇಳಿಕೆ ಮಾಡಲಾಗಿದ್ದು, ಇದರಿಂದ ಚಿಲ್ಲರೆ ದರ ಕಡಿಮೆಯಾಗುವ ಸಾಧ್ಯತೆ ಇದೆ. ಅಡುಗೆ ಎಣ್ಣೆ ದರ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಬೆಲೆ ಇಳಿಕೆಯಾಗುವುದರಿಂದ ಅನುಕೂಲವಾಗಲಿದೆ.
ಸೂರ್ಯಕಾಂತಿ ಎಣ್ಣೆ, ತಾಳೆ ಎಣ್ಣೆ, ಸೋಯಾ ಎಣ್ಣೆಯ ಆಮದು ಸುಂಕದ ಮೂಲ ದರವನ್ನು ಕೇಂದ್ರ ಸರ್ಕಾರ ಶೇಕಡ 30.25 ರಿಂದ ಶೇಕಡ 24.75 ಕಡಿಮೆ ಮಾಡಿದ್ದು, ಸಂಸ್ಕರಿತ ತಾಳೆ ಮತ್ತು ಸೋಯಾ ಎಣ್ಣೆಯ ಸುಂಕವನ್ನು 41.25 ರಿಂದ ಶೇಕಡ 30.75 ಕ್ಕೆ ಇಳಿಕೆ ಮಾಡಲಾಗಿದೆ.
ಅದೇ ರೀತಿ ಕಚ್ಚಾ ತಾಳೆ ಎಣ್ಣೆ ಆಮದು ಸುಂಕ ಶೇಕಡ 10 ರಿಂದ ಶೇಕಡ 2.5 ರಷ್ಟು ಕಡಿಮೆಯಾಗಿದೆ. ಕಚ್ಚಾ ಸೂರ್ಯಕಾಂತಿ ಮತ್ತು ಸೋಯಾ ಎಣ್ಣೆ ಆಮದು ಸುಂಕವನ್ನು ಶೇ 7.5 ರಿಂದ ಶೇಕಡ 2.5 ರಷ್ಟು ಕಡಿಮೆ ಮಾಡಲಾಗಿದೆ.
ಆಮದು ಸುಂಕ ಕಡಿತ ನಂತರ ಕಚ್ಚಾ ಸೋಯಾ, ತಾಳೆ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆ ಆಮದು ಸುಂಕ ಶೇಖಡ 24.75 ರಷ್ಟು ಆಗಿದ್ದು, ಇದರಿಂದ ಚಿಲ್ಲರೆ ಮಾರಾಟ ದರ ಕೂಡ ಕಡಿಮೆಯಾಗಲಿದೆ ಎನ್ನಲಾಗಿದೆ.