ನವದೆಹಲಿ: ಯುದ್ಧಪೀಡಿತ ಉಕ್ರೇನ್ ನಿಂದ ಕಚ್ಚಾ ಸೂರ್ಯಕಾಂತಿ ಎಣ್ಣೆ ಸರಬರಾಜು ನಿಂತಿದೆ. ಅಲ್ಲಿ ಕಚ್ಚಾ ಸೂರ್ಯಕಾಂತಿ ಎಣ್ಣೆಯನ್ನು ನೌಕೆಗಳಿಗೆ ತುಂಬಿಸಲಾಗದಂತಹ ಪರಿಸ್ಥಿತಿ ಇದೆ. ಈ ಕಾರಣದಿಂದ ರಷ್ಯಾದಿಂದ ದುಬಾರಿ ಬೆಲೆಗೆ ಸೂರ್ಯಕಾಂತಿ ಎಣ್ಣೆ ಖರೀದಿಸಲಾಗುತ್ತದೆ.
ಭಾರತ ರಷ್ಯಾದೊಂದಿಗೆ 45 ಸಾವಿರ ಟನ್ ಎಣ್ಣೆ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದು, ಏಪ್ರಿಲ್ ನಲ್ಲಿ ಪೂರೈಕೆಯಾಗಲಿದೆ.
ಜೆಮಿನಿ ಅಡುಗೆ ಎಣ್ಣೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಚೌಧರಿ ಅವರು, ಯುದ್ಧ ಆರಂಭಕ್ಕೆ ಮೊದಲು ಸಾಗಣೆ ಮತ್ತು ವಿಮೆ ವೆಚ್ಚ ಸೀರೆ ಪ್ರತಿ ಟನ್ ಕಚ್ಚಾ ತೈಲ ದರ 1.20 ಲಕ್ಷ ರೂಪಾಯಿ ಇತ್ತು. ಈಗ 1.60 ಲಕ್ಷ ರೂ.ಗೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ.
ಭಾರತ ಖಾದ್ಯತೈಲವನ್ನು ಅತಿ ಹೆಚ್ಚು ಆಮದು ಮಾಡಿಕೊಳ್ಳುವ ದೇಶವಾಗಿದೆ. ಇಂಡೋನೇಷ್ಯಾದಿಂದ ತಾಳೆ ಎಣ್ಣೆಯನ್ನು ಖರೀದಿಸಲಾಗುತ್ತದೆ. ಆದರೆ ಇಂಡೋನೇಷ್ಯಾ ಖರೀದಿಗೆ ಮಿತಿ ಹೇರಿದೆ. ದಕ್ಷಿಣ ಅಮೇರಿಕ ದೇಶಗಳಿಂದ ಭಾರತಕ್ಕೆ ಸೋಯಾಬೀನ್ ಎಣ್ಣೆ ಸರಬರಾಜಾಗುತ್ತದೆ. ಆದರೆ, ಆ ದೇಶಗಳಲ್ಲಿ ಎಣ್ಣೆಕಾಳುಗಳ ಇಳುವರಿ ಕಡಿಮೆಯಾಗಿದೆ. ಹೀಗೆ ಅನೇಕ ಕಾರಣಗಳಿಂದಾಗಿ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಕೊರತೆ ಉಂಟಾಗುತ್ತಿದೆ. ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ಎಂದು ಹೇಳಲಾಗಿದೆ.