ಮಂಡ್ಯ: ಕೃಷಿ ಸಚಿವ ಚೆಲುವರಾಯ ಸ್ವಾಮಿ ಅವರ ವಿರುದ್ಧ ಲಂಚ ಕೇಳಿದ ಆರೋಪ ಮಾಡಿ ರಾಜ್ಯಪಾಲರಿಗೆ ಪತ್ರ ಬರೆದಿದ್ದ ಆರೋಪದ ಮೇಲೆ ಕೃಷಿ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಇದರೊಂದಿಗೆ ಸಚಿವರ ವಿರುದ್ಧ ಲಂಚದ ಆರೋಪ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಮಂಡ್ಯ ಜಿಲ್ಲೆ ಕೆಆರ್ ನಗರದ ಸಹಾಯಕ ಕೃಷಿ ನಿರ್ದೇಶಕ ಗುರುಪ್ರಸಾದ್, ಕೃಷಿ ಅಧಿಕಾರಿ ಸುದರ್ಶನ್ ಅವರನ್ನು ಮಂಡ್ಯ ಪೊಲೀಸರು ಶನಿವಾರ ರಾತ್ರಿ ಬಂಧಿಸಿ ಸಿಐಡಿ ಅಧಿಕಾರಿಗಳಿಗೆ ಒಪ್ಪಿಸಿದ್ದು, ಸಿಐಡಿ ಅಧಿಕಾರಿಗಳು ಸೋಮವಾರ ಜೆಎಂಎಫ್‌ಸಿ ನ್ಯಾಯಾಧೀಶರ ಎದುರು ಹಾಜರುಪಡಿಸಲಿದ್ದಾರೆ.
ಕೃಷಿ ಸಚಿವರು ಒಬ್ಬೊಬ್ಬರಿಂದ 7-8 ಲಕ್ಷ ರೂ. ಕೇಳಿದ್ದು, ಇದಕ್ಕೆ ಕಡಿವಾಣ ಹಾಕಲು ಕ್ರಮವಹಿಸದಿದ್ದಲ್ಲಿ ಅಧಿಕಾರಿಗಳು ಕುಟುಂಬ ಸದಸ್ಯರೊಂದಿಗೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಮಂಡ್ಯ ಜಿಲ್ಲೆಯ 7 ಮಂದಿ ಸಹಾಯಕ ಕೃಷಿ ನಿರ್ದೇಶಕರ ಹೆಸರಲ್ಲಿ ಕೆಲವು ದಿನಗಳ ಹಿಂದೆ ರಾಜ್ಯಪಾಲರಿಗೆ ಪತ್ರ ಬರೆದಿದ್ದು, ಇದರ ಅನ್ವಯ ನಿಯಮಾನುಸಾರ ಕ್ರಮ ಕೈಗೊಳ್ಳಲು ರಾಜ್ಯಪಾಲರ ಅಧೀನ ಕಾರ್ಯದರ್ಶಿಗಳು ಆಗಸ್ಟ್ 1ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಪತ್ರ ಬರೆದಿದ್ದರು. ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಟಿಗೆ ವಹಿಸಿತ್ತು. ಈ ವಿಚಾರ ರಾಜಕೀಯ ಆರೋಪ, ಪ್ರತ್ಯಾರೋಪಗಳಿಗೂ ಕಾರಣವಾಗಿತ್ತು.