ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಸೇವೆ ಸಿಗಬೇಕು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಪ್ರಯತ್ನ ಮಾಡಲಿದೆ. ಖಾಸಗಿ ಆಸ್ಪತ್ರೆಗೆ ಹೋಗುವವರು ಸರ್ಕಾರಿ ಆಸ್ಪತ್ರೆಗೆ ಬರಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆದ 21ನೇ ಕರ್ನಾಟಕ ರಾಜ್ಯ ಮಟ್ಟದ ಫ್ಲಾರೆನ್ಸ್ ನೈಟಿಂಗೇಲ್ ಶುಶ್ರೂಷ ಅಧಿಕಾರಗಳ ಪ್ರಶಸ್ತಿ ಪ್ರದಾನ ಸಮಾರಂಭ 2023 ರಲ್ಲಿ ಪಾಲ್ಗೊಂಡು, ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.
ಸಿಎಂ, ನರ್ಸಿಂಗ್ ವೃತ್ತಿ ಬಹಳ ಪವಿತ್ರವಾದ ವೃತ್ತಿಯಾಗಿದೆ. ದೀರ್ಘಕಾಲ ನರ್ಸಿಂಗ್ ವೃತ್ತಿ ಮಾಡಿದವರಿಗೆ ಪ್ರಶಸ್ತಿ ಸಿಕ್ಕಿದೆ. ವೈದ್ಯರು ಹೇಳಿದಂತೆ ಕಾಲಕಾಲಕ್ಕೆ ಚಿಕಿತ್ಸೆ ನೀಡುವುದು ನರ್ಸ್ ಗಳು. ವೈದ್ಯರು ತಪಾಸಣೆ ಮಾಡುತ್ತಾರೆ, ನರ್ಸ್ ಗಳು ಚಿಕಿತ್ಸೆ ಕೊಡುತ್ತಾರೆ. ವಿಲ್ ಪವರ್ ಇದ್ದರೆ ಕ್ಯಾನ್ಸರ್ ರೋಗಿಗಳು ಗುಣಮುಖರಾಗಬಹುದು. ವಿಲ್ ಪವರ್ ಬರಬೇಕಾದರೆ ನರ್ಸ್ ಗಳು ಉತ್ತಮ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.
ಜಯದೇವ ಆಸ್ಪತ್ರೆಯಲ್ಲಿ ರಾಜಕಾರಣಿಗಳು ಚಿಕಿತ್ಸೆ ಪಡೆದುಕೊಳ್ಳಬಹುದು. ಹಾಗಾದರೆ ಉಳಿದ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ರೀತಿ ಯಾಕೆ ಆಗುವುದಿಲ್ಲ? ಸರ್ಕಾರಿ ಆಸ್ಪತ್ರೆಗಳು ಏನೂ ಕಡಿಮೆ ಇಲ್ಲ ಅನ್ನುವ ರೀತಿ ಮಾಡೋಣ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.