ನವದೆಹಲಿ: ಕಳೆದ ವರ್ಷ ಕೋವಿಡ್ ಬಿಕ್ಕಟ್ಟಿನ ನಡುವೆ ಎನ್.ಪಿ.ಎಸ್. ಮತ್ತು ಅಟಲ್ ಪಿಂಚಣಿ ಯೋಜನೆ ಪಡೆದವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಅಟಲ್ ಪಿಂಚಣಿ ಯೋಜನೆಗೆ 77 ಲಕ್ಷ ಹೊಸ ಸದಸ್ಯರ ಸೇರ್ಪಡೆಯಾಗಿದೆ.
ರಾಷ್ಟ್ರೀಯ ಪಿಂಚಣಿ ಯೋಜನೆಗೆ ಪ್ರವೇಶಿಸಲು ಗರಿಷ್ಠ ವಯೋಮಿತಿಯನ್ನು 65 ರಿಂದ 70 ವರ್ಷಕ್ಕೆ ಏರಿಸಲು ಪಿಂಚಣಿ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರ(PFRDAI) ಪರಿಶೀಲನೆ ನಡೆಸಿದ್ದು, ಇದು ಸಾಧ್ಯವಾದಲ್ಲಿ 70 ವರ್ಷದ ಹಿರಿಯರಿಗೂ ಎನ್.ಪಿ.ಎಸ್. ಪ್ರಯೋಜನ ಸಿಗಲಿದೆ.
ರಾಷ್ಟ್ರೀಯ ಪಿಂಚಣಿ ಯೋಜನೆಗೆ 65 ವರ್ಷ ಮೀರಿದ ವ್ಯಕ್ತಿಗಳು ಸೇರ್ಪಡೆಯಾಗಲು ಅವಕಾಶ ಕಲ್ಪಿಸುವ ಕುರಿತು ಚಿಂತನೆ ನಡೆದಿದೆ. ಇದರಿಂದ 70 ವರ್ಷದವರಗೆ ಗರಿಷ್ಠ ಮಿತಿ ವಿಸ್ತರಣೆಗೆ ಪರಿಶೀಲನೆ ನಡೆಸಲಾಗಿದೆ ಎಂದು ಪಿಂಚಣಿ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುಪ್ರತಿಮ್ ಬಂಡೋಪಾಧ್ಯಾಯ ಹೇಳಿದ್ದಾರೆ.
ಈ ಹಿಂದೆ ವಯೋಮಿತಿಯನ್ನು 60 ರಿಂದ 65 ವರ್ಷಕ್ಕೆ ಹೆಚ್ಚಳ ಮಾಡಿದ ಸಂದರ್ಭದಲ್ಲಿ 15 ಸಾವಿರಕ್ಕೂ ಅಧಿಕ ಮಂದಿ ಯೋಜನೆಗೆ ಸೇರ್ಪಡೆಯಾಗಿದ್ದರು. ಪ್ರಸಕ್ತ ಸಾಲಿನಲ್ಲಿ ಹೊಸದಾಗಿ 10 ಲಕ್ಷ ಮಂದಿ ಸೇರ್ಪಡೆ ಮಾಡುವ ಗುರಿ ಹೊಂದಲಾಗಿದೆ.
ಎನ್.ಪಿ.ಎಸ್. ಯೋಜನೆಯಲ್ಲಿ ಉದ್ಯೋಗಿಗಳಿಗೆ ಶೇಕಡ 50 ರಷ್ಟು ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಅವಕಾಶವಿದ್ದು, ದೀರ್ಘಾವಧಿಯಲ್ಲಿ ಷೇರುಗಳಲ್ಲಿ ಹೂಡಿಕೆ ಮಾಡುವುದರಿಂದ ಅಧಿಕ ವರಮಾನ ಬರುತ್ತದೆ. ಇಪಿಎಫ್ ನಲ್ಲಿ ಉದ್ಯೋಗಿಗಳು ತೊಡಗಿಸುವ ಹಣವನ್ನು ಸರ್ಕಾರದ ಭದ್ರತಾ ಪತ್ರಗಳಲ್ಲಿ ತೊಡಗಿಸಲಾಗುವುದು ಎನ್ನಲಾಗಿದೆ.