ಬೆಂಗಳೂರು: ಆರ್ಥಿಕ ಇಲಾಖೆ ವತಿಯಿಂದ ಸರ್ಕಾರಿ ನೌಕರರು ಮೃತಪಟ್ಟ ಸಂದರ್ಭದಲ್ಲಿ ಅವರ ನಾಮನಿರ್ದೇಶಿತರಿಗೆ ಪಿಂಚಣಿ ಸೌಲಭ್ಯ ನೀಡಲು ಪಾಲಿಸುವ ನಿಯಮಗಳ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಪ್ರಾನ್ ನೌಕರರ ವಂತಿಗೆ ಹಾಗೂ ಅದರ ಮೇಲಿನ ಆದಾಯವನ್ನು ಹಿಂಪಡೆಯಲು ನಿರ್ದೇಶಕರು ಆಯ್ಕೆ ಮಾಡಿಕೊಂಡರೆ ಪೂರ್ಣ ಮೊತ್ತ ನೀಡಬೇಕೆಂದು ತಿಳಿಸಲಾಗಿದೆ.
ಎನ್.ಪಿ.ಎಸ್. ಯೋಜನೆಗೆ ಒಳಪಡುವ ಸರ್ಕಾರಿ ನೌಕರರು 2018ರ ಏಪ್ರಿಲ್ 1 ರ ನಂತರ ಸೇವೆಯಲ್ಲಿರುವಾಗಲೇ ಮೃತಪಟ್ಟ ಸಂದರ್ಭದಲ್ಲಿ ಅವರ ನಾಮನಿರ್ದೇಶಿತ ಕುಟುಂಬ ಪಿಂಚಣಿ ಆಯ್ಕೆ ಮಾಡಿಕೊಂಡಿದ್ದಲ್ಲಿ ಪ್ರಾನ್ ಖಾತೆ ಸಂಗ್ರಹವಾದ ಮೊತ್ತದಲ್ಲಿ ಮೃತ ನೌಕರರ ವಂತಿಕೆ ಮತ್ತು ಅದರ ಮೇಲಿನ ಆದಾಯವನ್ನು ಖಜಾನೆ 2 ಚಲನ್ ಮೂಲಕ ಜಮಾ ಮಾಡಲು ಹಣಕಾಸು ಇಲಾಖೆ ಆದೇಶಿಸಿದೆ.
ಖಜಾನೆ ಇಲಾಖೆ ಆಯುಕ್ತರು ಈ ಕುರಿತು ಪ್ರಸ್ತಾವನೆ ಸಲ್ಲಿಸಿ, ಕೇಂದ್ರದ ಆದೇಶದನ್ವಯ ಮೃತಪಟ್ಟ ನೌಕರರ ವಂತಿಕೆ ಮತ್ತು ಅದರ ಮೇಲಿನ ಆದಾಯವನ್ನು ಅವರ ನಾಮನಿರ್ದೇಶಿತರಿಗೆ ಇತ್ಯರ್ಥಪಡಿಸುವ ಕುರಿತಾಗಿ ಕೋರಿದ್ದರು. ಈ ಪ್ರಸ್ತಾವನೆಯನ್ನು ಪುರಸ್ಕರಿಸಿದ ಹಣಕಾಸು ಇಲಾಖೆ ಆದೇಶ ಹೊರಡಿಸಿದ್ದು, ಎನ್.ಪಿ.ಎಸ್. ಘಟಕ ಕೆಲವು ನಿಯಮಗಳ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಹೇಳಲಾಗಿದೆ.
ಮೃತ ನೌಕರರ ಪ್ರಾನ್ ಖಾತೆಯಲ್ಲಿರುವ ಮೊತ್ತ ಪಡೆದುಕೊಳ್ಳಲು ನಾಮನಿರ್ದೇಶಿತರ ಕೋರಿಕೆಯ ಮೇರೆಗೆ NSDL -CRA ಗೆ ಕ್ಲೇಮ್ ಮಾಡಬೇಕು.
ಖಜಾನೆ ಆಯುಕ್ತರ ಪದನಾಮದಲ್ಲಿ ಶಿವಾಜಿನಗರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಖಾತೆಯಲ್ಲಿರುವ ಸಂಪೂರ್ಣವಾದ ಮೊತ್ತ ಜಮಾ ಮಾಡಬೇಕು. ಮೊತ್ತದ ವಿವರವನ್ನು ಎನ್.ಪಿ.ಎಸ್. ಘಟಕಕ್ಕೆ ಇಮೇಲ್ ಮೂಲಕ ತಿಳಿಸಬೇಕು. ಪ್ರಾಕ್ಸಿ ಪೂಲ್ ಬ್ಯಾಂಕ್ ಖಾತೆಗೆ ಜಮಾ ಆದ ಹಣವನ್ನು ಖಜಾನೆ 2 ಚಲನ್ ಮೂಲಕ ಜಮಾ ಮಾಡಬೇಕು. ಮೃತ ನೌಕರರ ನಾಮನಿರ್ದೇಶಿತರು ದೃಢೀಕೃತ ಐಡಿ ವಿವರವನ್ನು ಕುಟುಂಬ ಪಿಂಚಣಿ ಪ್ರಸ್ತಾವನೆಯೊಂದಿಗೆ ಖಜಾನೆಗೆ ನೀಡಬೇಕು ಎಂದು ಹೇಳಲಾಗಿದೆ.