ನವದೆಹಲಿ: ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬಳಕೆ ಮಾಡುವ ಔಷಧಗಳು ಸೇರಿದಂತೆ 23 ಔಷಧಗಳ ಚಿಲ್ಲರೆ ಮಾರಾಟ ಬೆಲೆ ನಿಗದಿಪಡಿಸಿ ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದೆ.
ಕಳೆದ ತಿಂಗಳು ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ ನಡೆಸಿದ ಸಭೆಯಲ್ಲಿ ಔಷಧಗಳ ಚಿಲ್ಲರೆ ಮಾರಾಟ ಬೆಲೆಯನ್ನು ಕಡಿಮೆ ಮಾಡಲು ನಿರ್ಧರಿಸಲಾಗಿತ್ತು. ಮಧುಮೇಹಕ್ಕೆ ಬಳಕೆ ಮಾಡುವ ಗ್ಲಿಕ್ಲಾಜೈಡ್ ಇಆರ್, ಮೆಟ್ ಫಾರ್ಮಿನ್ ಹೈಡ್ರೋಕ್ಲೋರೈಡ್ ಮಾತ್ರೆಗಳ ದರವನ್ನು 10.03 ರೂ., ಟೆಲ್ಮಿಸಾರ್ಟನ್, ಕ್ಲೋರ್ತಾಲಿಡೋನ್, ಸಿಲ್ಡಿಡಿಫೈನ್ ಮಾತ್ರೆಗಳ ದರವನ್ನು 13.17 ರೂ.ಗೆ ನಿಗದಿ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ.
ಮಧುಮೇಹ ಮತ್ತು ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆ ನೀಡುವ ಔಷಧಗಳು ಸೇರಿದಂತೆ 23 ಔಷಧಗಳ ಚಿಲ್ಲರೆ ಬೆಲೆಗಳನ್ನು ನಿಗದಿಪಡಿಸಲಾಗಿದೆ ಎಂದು ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಕ NPPA ಶುಕ್ರವಾರ ಹೇಳಿದೆ. ಮೇ 26, 2023 ರಂದು 113 ನೇ ಪ್ರಾಧಿಕಾರದ ಸಭೆಯ ನಿರ್ಧಾರದ ಆಧಾರದ ಮೇಲೆ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರವು(NPPA) ಔಷಧಗಳ(ಬೆಲೆ ನಿಯಂತ್ರಣ) ಆದೇಶ, 2013 ರ ಅಡಿಯಲ್ಲಿ ಬೆಲೆಗಳನ್ನು ನಿಗದಿಪಡಿಸಿದೆ.