ಬ್ಯಾಂಕ್ ಖಾತೆ, ಷೇರುಗಳ ಖರೀದಿ ಹಾಗೂ ಮಾರಾಟದ ವೇಲೆ ಡಿಮ್ಯಾಟ್ ಅಥವಾ ಟ್ರೇಡಿಂಗ್ ಖಾತೆಯನ್ನು ತೆರೆಯುವಾಗ ನಾಮಿನಿ ಸೂಚಿಸುವುದು ಬಹಳ ಮುಖ್ಯ. ಒಂದು ವೇಳೆ ನಾಮಿನಿ ಹೆಸರು ಸೂಚಿಸದೆ ಖಾತೆದಾರ ಸತ್ತರೆ ಆಗ ಸಾಕಷ್ಟು ತೊಂದರೆಗಳನ್ನ ಎದುರಿಸಬೇಕಾಗುತ್ತದೆ. ಖಾತೆ ತೆರೆಯುವಾಗ ನಾಮಿನಿ ಸೇರಿಸಲು ಅನೇಕ ಜನರು ಮರೆಯುತ್ತಾರೆ.
ಟ್ರೇಡಿಂಗ್ ಖಾತೆ ತೆರೆಯುವಾಗ ಅರ್ಜಿದಾರರು ನಾಮಿನಿ ಫಾರ್ಮ್ ಡೌನ್ಲೋಡ್ ಮಾಡಿಕೊಳ್ಳಬೇಕು. ಅದನ್ನು ಭರ್ತಿ ಮಾಡಿದ ನಂತರ ಸಹಿ ಮಾಡಿ ಕೊರಿಯರ್ನಿಂದ ಬ್ರೋಕರ್ಗೆ ಕಳುಹಿಸಬೇಕು. ಇದು ಕಿರಿಕಿರಿ ಕೆಲಸ ಎನ್ನುವ ಕಾರಣಕ್ಕೆ ಅನೇಕರು ನಾಮಿನಿ ಅರ್ಜಿ ತುಂಬುವುದಿಲ್ಲ. ಖಾತೆದಾರ ನಾಮಿನಿ ಸೂಚಿಸದೆ ಸತ್ತರೆ ಉತ್ತರಾಧಿಕಾರಿಗಳು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
ನಾಮಿನಿ ಮಾಡದೆ ಖಾತೆದಾರ ಸತ್ತರೆ, ಗೆಜೆಟೆಡ್ ಅಧಿಕಾರಿಯಿಂದ ಮರಣ ಪ್ರಮಾಣ ಪತ್ರ ನೀಡಬೇಕು. ಅಪ್ಲಿಕೇಶನ್ ಸರಿಯಾಗಿದೆ ಎಂದು ಖಚಿತಪಡಿಸಿಕೊಂಡ ನಂತರ ಸ್ಟಾಕ್ ಬ್ರೋಕರ್ ಷೇರುಗಳನ್ನು ಹಕ್ಕುದಾರರ ಖಾತೆಗೆ ವರ್ಗಾಯಿಸುತ್ತಾರೆ.
ಷೇರುಗಳ ಮೌಲ್ಯವು 5 ಲಕ್ಷ ರೂಪಾಯಿಗಿಂತ ಕಡಿಮೆಯಿದ್ದರೆ ಕಾನೂನು ಉತ್ತರಾಧಿಕಾರಿಗಳು ಕೆಲವು ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಇವುಗಳಲ್ಲಿ ಮರಣ ಪ್ರಮಾಣಪತ್ರ, ನೋಟರಿ ಪತ್ರ, ಅಫಿಡವಿಟ್, ಎಲ್ಲಾ ಉತ್ತರಾಧಿಕಾರಿಗಳಿಂದ ಆಕ್ಷೇಪಣೆ ಪ್ರಮಾಣಪತ್ರ ಸೇರಿದೆ.
ಷೇರುಗಳ ಮೌಲ್ಯವು 5 ಲಕ್ಷ ರೂಪಾಯಿಗಿಂತ ಹೆಚ್ಚಿದ್ದರೆ, ಕಾನೂನು ಉತ್ತರಾಧಿಕಾರಿಗಳು ಮತ್ತಷ್ಟು ದಾಖಲೆಗಳನ್ನು ನೀಡಬೇಕಾಗುತ್ತದೆ. ನಾಮಿನಿ, ಆಸ್ತಿ ಹೊಂದಿರುವವರ ಉಸ್ತುವಾರಿ ಮಾತ್ರ. ಕಾನೂನು ಉತ್ತರಾಧಿಕಾರಿಗಳು ನಿಜವಾದ ಅರ್ಹತೆ ಹೊಂದಿರುತ್ತಾರೆ. ಹಾಗಾಗಿ ಕಾನೂನುಬದ್ಧವಾಗಿ ಉತ್ತರಾಧಿಕಾರಿ ನೇಮಿಸುವುದು ಉತ್ತಮ.