ಹಳೆ ಬಂಗಾರ ಮಾರಾಟ ಮಾಡುವ ಜನರಿಗೆ ಇನ್ಮುಂದೆ ಕಡಿಮೆ ಲಾಭ ಸಿಗಲಿದೆ. ಹಳೆ ಬಂಗಾರಕ್ಕೂ ಜಿಎಸ್ಟಿ ಪಾವತಿ ಮಾಡಬೇಕಾಗುತ್ತದೆ. ಇದ್ರ ಬಗ್ಗೆ ಮುಂದಿನ ಸಭೆಯಲ್ಲಿ ನಿರ್ಧರಿಸಲಾಗುವುದು. ಕೇರಳದ ಹಣಕಾಸು ಸಚಿವ ಥಾಮಸ್ ಇಸಾಕ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಹಳೆ ಬಂಗಾರಕ್ಕೆ ಶೇಕಡಾ 3ರಷ್ಟು ಜಿಎಸ್ಟಿ ವಿಧಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ಒಂದು ವೇಳೆ ಇದು ಜಾರಿಗೆ ಬಂದಲ್ಲಿ ಜನರಿಗೆ ಹಳೆ ಬಂಗಾರ ಮಾರಾಟದಿಂದ ಕಡಿಮೆ ಲಾಭ ಸಿಗಲಿದೆ. ರಾಜ್ಯ ಹಣಕಾಸು ಮಂತ್ರಿಗಳ ಸಮಿತಿ ಈ ಪ್ರಸ್ತಾವನೆಯನ್ನು ಒಪ್ಪಿದೆ ಎಂದು ಥಾಮಸ್ ಹೇಳಿದ್ದಾರೆ.
ಕೇರಳ, ಬಿಹಾರ, ಗುಜರಾತ್, ಪಂಜಾಬ್, ಕರ್ನಾಟಕ ಮತ್ತು ಪಶ್ಚಿಮ ಬಂಗಾಳದ ಹಣಕಾಸು ಮಂತ್ರಿಗಳು ಈ ಸಮಿತಿಯಲ್ಲಿ ಸೇರಿದ್ದಾರೆ. ಚಿನ್ನ ಮತ್ತು ಅಮೂಲ್ಯ ರತ್ನಗಳ ಸಾಗಣೆಗೆ ಇ-ವೇ ಮಸೂದೆಯ ಅನುಷ್ಠಾನವನ್ನು ಪರಿಶೀಲಿಸಲು ಈ ಮಂತ್ರಿಗಳ ಗುಂಪನ್ನು ರಚಿಸಲಾಗಿತ್ತು. ಮಂತ್ರಿಗಳ ಗುಂಪು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಸೇರಿತ್ತು. ಒಂದು ಲಕ್ಷ ರೂಪಾಯಿ ಮೌಲ್ಯದ ಹಳೆಯ ಆಭರಣಗಳನ್ನು ಮಾರಾಟ ಮಾಡಿದರೆ, 3000 ರೂಪಾಯಿಗಳನ್ನು ಜಿಎಸ್ಟಿ ಎಂದು ಕಡಿತಗೊಳಿಸಲಾಗುತ್ತದೆ.