ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಕೇಂದ್ರ ಮೋಟಾರು ವಾಹನ ಕಾಯ್ದೆ 1989 ರಲ್ಲಿ ಪ್ರಮುಖ ಬದಲಾವಣೆ ಮಾಡಿದೆ. ಗ್ರಾಹಕರು ಕಾರು ಅಥವಾ ಬೈಕ್ ಖರೀದಿಸುವಾಗ ನಾಮಿನಿ ಮಾಡುವ ಸೌಲಭ್ಯವನ್ನು ಪಡೆಯುತ್ತಾರೆ. ನೋಂದಣಿ ಪ್ರಮಾಣಪತ್ರದಲ್ಲಿ ನಾಮನಿರ್ದೇಶನ ಮಾಡಬಹುದು.
ವಾಹನ ನೋಂದಣಿ ಸಮಯದಲ್ಲಿ ನಾಮಿನಿ ಮಾಡಬಹುದು. ಒಂದು ವೇಳೆ ಮಾಲೀಕ ಸಾವನ್ನಪ್ಪಿದರೆ ನಾಮಿನಿಯ ಹೆಸರಿಗೆ ವಾಹನ ವರ್ಗಾಯಿಸಲಾಗುತ್ತದೆ. ವಾಹನದ ಮಾಲೀಕರ ಮರಣದ ನಂತರ ಕುಟುಂಬದವರ ಹೆಸರಿಗೆ ವಾಹನ ವರ್ಗಾಯಿಸುವ ಪ್ರಕ್ರಿಯೆಯು ತುಂಬಾ ಕಷ್ಟಕರವಾಗಿತ್ತು. ಈ ನಿಯಮ ಪ್ರತಿ ರಾಜ್ಯದಲ್ಲೂ ವಿಭಿನ್ನವಾಗಿವೆ. ಹಾಗಾಗಿ ಕುಟುಂಬಸ್ಥರು ಅನೇಕ ಬಾರಿ ಕಚೇರಿಗೆ ಓಡಾಡಬೇಕಾಗಿತ್ತು.
ಇನ್ಮುಂದೆ ನಿಯಮ ಬದಲಾಗಿದೆ. ಕೆಲಸ ಸುಲಭವಾಗಲಿದೆ. ನೋಂದಣಿಯ ಸಮಯದಲ್ಲಿ ನಾಮಿನಿಯನ್ನು ಘೋಷಿಸಬಹುದು. ಆನ್‌ಲೈನ್ ಅಪ್ಲಿಕೇಶನ್ ಮೂಲಕ ನಾಮಿನಿ ಹೆಸರು ಘೋಷಣೆ ಮಾಡಬಹುದು. ಸಚಿವಾಲಯ ಹೊರಡಿಸಿದ ಅಧಿಸೂಚನೆಯ ಪ್ರಕಾರ, ವಾಹನದ ಮಾಲೀಕರು ನಾಮಿನಿಯ ಗುರುತಿನ ಪುರಾವೆಗಳನ್ನು ಮಾತ್ರ ಸಲ್ಲಿಸಬೇಕಾಗುತ್ತದೆ. ವಾಹನ ಮಾಲೀಕರ ಮರಣದ ನಂತರ ಆರ್‌ಟಿಒಗೆ ತಿಳಿಸಬೇಕು. ವಾಹನ ಮಾಲೀಕರು ಸಾವನ್ನಪ್ಪಿದ ಮೂರು ತಿಂಗಳೊಳಗೆ ನಾಮಿನಿ ಫಾರ್ಮ್ -31 ಅನ್ನು ಪ್ರಾಧಿಕಾರಕ್ಕೆ ಸಲ್ಲಿಸಬೇಕಾಗುತ್ತದೆ. ಇದರ ಅಡಿಯಲ್ಲಿ ನಾಮಿನಿ ತನ್ನ ಹೆಸರಿನಲ್ಲಿ ಮಾಲೀಕತ್ವದ ವರ್ಗಾವಣೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.