ನವದೆಹಲಿ: ವಾಹನ ಸವಾರರಿಗೆ ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಸಿಹಿ ಸುದ್ದಿ ನೀಡಿದ್ದಾರೆ. 60 ಕಿಲೋಮೀಟರ್ ಒಳಗಿನ ಟೋಲ್ ಸಂಗ್ರಹ ಕೇಂದ್ರಗಳನ್ನು ಮೂರು ತಿಂಗಳಲ್ಲಿ ಬಂದ್ ಮಾಡಲಾಗುವುದು. ಇನ್ನು ಮುಂದೆ 60 ಕಿಲೋಮೀಟರ್ ಗೆ ಒಂದೇ ಟೋಲ್ ಇರಲಿದೆ ಎಂದು ಅವರು ಘೋಷಣೆ ಮಾಡಿದ್ದಾರೆ.
ದೇಶಾದ್ಯಂತ ಎಲ್ಲ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತಿ 60 ಕಿಲೋಮೀಟರ್ ಗೆ ಒಂದೇ ಟೋಲ್ ಸಂಗ್ರಹ ಕೇಂದ್ರ ಇರಲಿದೆ. 60 ಕಿಲೋಮೀಟರ್ ಒಳಗೆ ಇರುವ ಹೆಚ್ಚುವರಿ ಟೋಲ್ ಸಂಗ್ರಹ ಕೇಂದ್ರಗಳನ್ನು ಮೂರು ತಿಂಗಳೊಳಗೆ ಮುಚ್ಚಲಾಗುವುದು ಎಂದು ಅವರು ಲೋಕಸಭೆಯಲ್ಲಿ ತಿಳಿಸಿದ್ದಾರೆ.
ಹೆದ್ದಾರಿ ಬಜೆಟ್ ಅನುದಾನ ಕುರಿತ ಚರ್ಚೆಯ ಸಂದರ್ಭದಲ್ಲಿ ಈ ಬಗ್ಗೆ ಮಾತನಾಡಿದ ನಿತಿನ್ ಗಡ್ಕರಿ, ಟೋಲ್ ಪ್ಲಾಜಾಗಳ ಸಮೀಪವಿರುವ ಜನರಿಗೆ ದಿನ ಓಡಾಡಲು ಪಾಸ್ ಗಳನ್ನು ವಿತರಿಸಲಾಗುತ್ತದೆ. ಸದ್ಯ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಗಳಲ್ಲಿನ ವಿಳಾಸದ ಗುರುತಿನ ಚೀಟಿ ತೋರಿಸಿ ಟೋಲ್ ಪ್ಲಾಜಾಗಳ ಸಮೀಪ ಇರುವವರು ವಿನಾಯಿತಿ ಪಡೆಯುತ್ತಿದ್ದಾರೆ. ಅಂಥವರಿಗೆ ಪಾಸ್ ನೀಡಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.
ಪ್ರಸ್ತುತ ಕೆಲವು ಹೆದ್ದಾರಿಗಳಲ್ಲಿ 60 ಕಿಲೋಮೀಟರ್ ಅಂತರದಲ್ಲಿ 2 -3 ಟೋಲ್ ಸಂಗ್ರಹ ಕೇಂದ್ರಗಳು ಇವೆ. ಇದರಿಂದ ವಾಹನ ಸವಾರರಿಗೆ ಪ್ರಯಾಣದ ಅವಧಿ ಹೆಚ್ಚಾಗುತ್ತದೆ. ಇದನ್ನು ತಡೆಯಲು 60 ಕಿಲೋಮೀಟರ್ ಗೆ ಒಂದೇ ಟೋಲ್ ಇರುವಂತೆ ನೋಡಿಕೊಳ್ಳಲಾಗುವುದು. 60 ಕಿ.ಮೀ. ಒಳಗಿನ ಹೆಚ್ಚುವರಿ ಟೋಲ್ ಸಂಗ್ರಹ ಕೇಂದ್ರಗಳನ್ನು ಮುಚ್ಚಲಾಗುವುದು ಎಂದು ಹೇಳಲಾಗಿದೆ.