ನವದೆಹಲಿ: ದೇಶದಲ್ಲಿ ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ಕಡಿತಗೊಳಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಕೇಂದ್ರ ಸರ್ಕಾರ ಶುಕ್ರವಾರ ಹೇಳಿದೆ.
ಲೋಕಸಭೆಯಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ್ ಖೂಬಾ ಲಿಖಿತ ಉತ್ತರ ನೀಡಿದ್ದು, ರಸಗೊಬ್ಬರ ಮೇಲಿನ ಸಬ್ಸಿಡಿ ಇಳಿಸುವ ಯಾವುದೇ ಪ್ರಸ್ತಾಪ ಇಲ್ಲ. ಸಬ್ಸಿಡಿಯನ್ನು ಇಳಿಕೆ ಮಾಡಿದರೆ ಅದರಿಂದ ಆಗುವ ಪರಿಣಾಮದ ಬಗ್ಗೆ ಅಧ್ಯಯನವನ್ನು ಕೂಡ ನಡೆಸಿಲ್ಲ ಎಂದು ಹೇಳಿದ್ದಾರೆ.
ರೈತರಿಗೆ ಕೈಗೆಟುಕುವ ದರದಲ್ಲಿ ಮಣ್ಣಿನ ಫಲವತ್ತತೆ ಹೆಚ್ಚಿಸುವ ರಸಗೊಬ್ಬರ ದೊರಕಿಸಿಕೊಡಬೇಕೆಂಬ ಉದ್ದೇಶದಿಂದ ಯೂರಿಯಾ ಮತ್ತು ಯೂರಿಯೇತರ ಗೊಬ್ಬರಗಳಿಗೆ ಸಬ್ಸಿಡಿ ನೀಡಲಾಗುತ್ತಿದೆ. 45 ಕೆಜಿ ಯುರಿಯಾ ಚೀಲಕ್ಕೆ 245 ರೂಪಾಯಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಅಂತರಾಷ್ಟ್ರೀಯ ಮಟ್ಟದ ದರಗಳನ್ನು ಪರಿಗಣಿಸಿ ಸಬ್ಸಿಡಿ ನಿರ್ಧರಿಸಲಾಗಿದೆ. 2022 -23ನೇ ಸಾಲಿನಲ್ಲಿ ಪಾಸ್ಪೇಟ್ ಮತ್ತು ಪೊಟ್ಯಾಶ್ ಗೊಬ್ಬರಕ್ಕೆ 42,000 ಕೋಟಿ ರೂ. ಸಬ್ಸಿಡಿ ನೀಡಲಾಗಿದೆ. ಪೋಷಕಾಂಶ ಆಧಾರಿತ ಸಬ್ಸಿಡಿ(ಎನ್ಬಿಎಸ್) ಅಡಿಯಲ್ಲಿ ಪಿ & ಕೆ ರಸಗೊಬ್ಬರಗಳ ದರವನ್ನು ನಿಯಂತ್ರಿಸುವ ಯಾವುದೇ ಯೋಜನೆಯನ್ನು ಪ್ರಸ್ತುತ ಸರ್ಕಾರ ಹೊಂದಿಲ್ಲ ಎಂದು ಹೇಳಿದ್ದಾರೆ.