ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗ ಗಮನದಲ್ಲಿಟ್ಟುಕೊಂಡು 2021ರ ಸೆಪ್ಟಂಬರ್ 30 ರವರೆಗೆ ಆಮ್ಲಜನಕ ಸಾಗಿಸುವ ವಾಹನಗಳಿಗೆ ಪರವಾನಿಗೆ ವಿನಾಯಿತಿ ನೀಡಲಾಗಿದೆ.
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಈ ಕುರಿತಾಗಿ ಮಾಹಿತಿ ನೀಡಿದ್ದು, ಆಮ್ಲಜನಕ ಸಿಲಿಂಡರ್ ಗಳನ್ನು ಸಾಗಿಸುವ ವಾಹನಗಳಿಗೆ ಮೋಟಾರು ಕಾಯ್ದೆ ಅಡಿಯಲ್ಲಿ ಸೆಪ್ಟಂಬರ್ 30 ರವರೆಗೆ ಪರವಾನಿಗೆ ಅಗತ್ಯವಿರುವುದಿಲ್ಲ. ಇಂತಹ ವಾಹನಗಳಿಗೆ ಸೆಪ್ಟೆಂಬರ್ 30ರ ವರೆಗೆ ವಿನಾಯಿತಿ ನೀಡಲಾಗಿದೆ ಎಂದು ಹೇಳಿದ್ದಾರೆ.
ಇದರಿಂದಾಗಿ ರಾಜ್ಯಗಳ ನಡುವೆ ಆಮ್ಲಜನಕ ಸಾಗಣೆ ಮತ್ತು ಪೂರೈಕೆಗೆ ಅನುಕೂಲವಾಗಲಿದೆ. ಕೊರೋನಾ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟಕ್ಕೆ ಬಲ ತುಂಬಲಿದೆ ಎಂದು ಅವರು ಹೇಳಿದ್ದಾರೆ.
ಈ ನಡುವೆ ವಾಹನ ಸ್ಕ್ರಾಪಿಂಗ್ ಪ್ರಮಾಣಪತ್ರ ಸಲ್ಲಿಸುವ ಬಗ್ಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮೋಟಾರು ವಾಹನ ತೆರಿಗೆಯಲ್ಲಿ ಕರಡು ಅಧಿಸೂಚನೆ ಹೊರ ತಂದಿದೆ. ಸಾರಿಗೆ ರಹಿತ ವಾಹನಗಳಿಗೆ ಶೇಕಡ 20 ರವರೆಗೆ, ಸಾರಿಗೆ ವಾಹನಗಳಿಗೆ ಶೇಕಡ 15 ರವರೆಗೆ ವಾಹನ ತೆರಿಗೆಯಲ್ಲಿ ರಿಯಾಯಿತಿ ಇರುತ್ತದೆ ಎಂದು ಹೇಳಲಾಗಿದೆ.