
ನವದೆಹಲಿ: ಎಲೆಕ್ಟ್ರಿಕ್, ಎಥೆನಾಲ್ ಮತ್ತು ಮಿಥನಾಲ್ ಇಂಧನದ ಮೂಲಕ ಸಂಚರಿಸುವ ಪ್ರವಾಸಿ ವಾಹನಗಳಿಗೆ ಆಲ್ ಇಂಡಿಯಾ ಟೂರಿಸ್ಟ್ ಪರ್ಮಿಟ್(ಎಐಟಿಪಿ) ಶುಲ್ಕ ರದ್ದುಪಡಿಸಲಾಗಿದೆ.
ಮೇ 1 ರಿಂದ ಬ್ಯಾಟರಿ, ಎಥೆನಾಲ್, ಇಥನಾಲ್ ಇಂಧನ ಮೂಲಕ ಚಲಿಸುವ ಪ್ರವಾಸಿ ವಾಹನಗಳು ಪರವಾನಗಿ ಪಡೆಯಲು ಮತ್ತು ನವೀಕರಣಕ್ಕಾಗಿ ಶುಲ್ಕ ಪಾವತಿಸಬೇಕಿಲ್ಲ. ರಸ್ತೆ ಸಾರಿಗೆ ಸಚಿವಾಲಯ ಅಧಿಸೂಚನೆ ಹೊರಡಿಸಿದ್ದು, ಪ್ರವಾಸಿ ವಾಹನಗಳಿಗೆ ಪರವಾನಿಗೆ ವಿತರಣೆ ಸುಗಮಗೊಳಿಸಲು ಹಾಗೂ ಪ್ರವಾಸಿ ವಾಹನ ನಿರ್ವಾಹಕರ ತೊಂದರೆ ಕಡಿಮೆ ಮಾಡಲು ಕ್ರಮ ಕೈಗೊಂಡಿದೆ.
ಅರ್ಜಿ ಸಲ್ಲಿಸಿದ ದಿನಾಂಕದಿಂದ 7 ದಿನಗಳ ಒಳಗೆ ಆಲ್ ಇಂಡಿಯಾ ಟೂರಿಸ್ಟ್ ಪರ್ಮಿಟ್ ವಾಹನಗಳಿಗೆ ಪರ್ಮಿಟ್ ಗಳನ್ನು ನೀಡುವುದನ್ನು ಕೂಡ ಕಡ್ಡಾಯಗೊಳಿಸಲಾಗಿದೆ. ರಾಜ್ಯ ಸಾರಿಗೆ ಪ್ರಾಧಿಕಾರಗಳು ಅರ್ಜಿ ಸ್ವೀಕರಿಸಿದ 7 ದಿನಗಳಲ್ಲಿ ಆಲ್ ಇಂಡಿಯಾ ಟೂರಿಸ್ಟ್ ಪರ್ಮಿಟ್ ನೀಡಬೇಕಿದೆ. 7 ದಿನಗಳೊಳಗೆ ಯಾವುದೇ ನಿರ್ಧಾರ ಕೈಗೊಳ್ಳದಿದ್ದರೆ ಪರವಾನಿಗೆಯನ್ನು ನೀಡಲಾಗಿದೆ. ಎಲೆಕ್ಟ್ರಾನಿಕ್ ವ್ಯವಸ್ಥೆ ಮೂಲಕ ಪರ್ಮಿಟ್ ಒದಗಿಸಲಾಗಿದೆ ಎಂದು ಪರಿಗಣಿಸಲಾಗುವುದು.
ಇದುವರೆಗೆ ಆಲ್ ಇಂಡಿಯಾ ಪರ್ಮಿಟ್ ಗಾಗಿ ಟ್ಯಾಕ್ಸಿಗಳಿಗೆ ವಾರ್ಷಿಕ 20,000 ರೂ. ಅಥವಾ ತ್ರೈಮಾಸಿಕವಾಗಿ 6,000 ರೂ. ಶುಲ್ಕ ಕಟ್ಟಬೇಕಿತ್ತು. 5 ರಿಂದ 9 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯದ ಪ್ರವಾಸಿ ವಾಹನಗಳಿಗೆ ವಾರ್ಷಿಕ 30,000 ಅಥವಾ ತ್ರೈಮಾಸಿಕವಾಗಿ 9000 ರೂ. ಶುಲ್ಕ ಪಾವತಿಸಬೇಕಿತ್ತು. 23 ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯುವ ಸಾಮರ್ಥ್ಯದ ಬಸ್ ಗಳು ವಾರ್ಷಿಕ ಶುಲ್ಕ ಮೂರು ಲಕ್ಷ ಅಥವಾ ತ್ರೈಮಾಸಿಕ ಶುಲ್ಕ 90,000 ರೂ. ಪಾವತಿಸಬೇಕಿತ್ತು, ಮೇ 1 ರಿಂದ ಪರ್ಮಿಟ್ ಗಾಗಿ ಯಾವುದೇ ಶುಲ್ಕ ಪಾವತಿಸಬೇಕಿಲ್ಲ ಎಂದು ಹೇಳಲಾಗಿದೆ.