ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(ಯುಐಡಿಎಐ) ತನ್ನ ಎಲ್ಲಾ ಸೇವೆಗಳು ಸ್ಥಿರವಾಗಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದೆ. ಪ್ಯಾನ್/ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‌ಒ) ಆಧಾರ್ ಲಿಂಕ್ ಮಾಡುವ ಸೌಲಭ್ಯದಲ್ಲಿ ಯಾವುದೇ ಅಡಚಣೆಗಳಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
PAN/EPFO ದೃಢೀಕರಣ ಆಧಾರಿತ ಸೌಲಭ್ಯವಾಗಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಕೂಡ ಹೇಳಿದೆ.
ಯುಐಡಿಎಐ ನೀಡಿರುವ ಹೇಳಿಕೆಯ ಪ್ರಕಾರ, ಕಳೆದ ಒಂದು ವಾರದಲ್ಲಿ ತನ್ನ ವ್ಯವಸ್ಥೆಯಲ್ಲಿ ಅತ್ಯಗತ್ಯ ಭದ್ರತಾ ಅಪ್ಗ್ರೇಡ್ ಅನ್ನು ಹಂತ ಹಂತವಾಗಿ ನಡೆಸುತ್ತಿದೆ, ಕೆಲವು ದಾಖಲಾತಿ/ಅಪ್ಡೇಟ್ ಕೇಂದ್ರಗಳಲ್ಲಿ ದಾಖಲಾತಿ ಮತ್ತು ಮೊಬೈಲ್ ಅಪ್ಡೇಟ್ ಸೇವಾ ಸೌಲಭ್ಯದಲ್ಲಿ ಮಾತ್ರ ಕೆಲವು ಮಧ್ಯಂತರ ಸೇವಾ ಅಡಚಣೆಗಳು ವರದಿಯಾಗಿವೆ. ಇದು ಕೂಡ ಅಪ್‌ಗ್ರೇಡ್ ಮಾಡಿದ ನಂತರ ಈಗ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.
ವ್ಯವಸ್ಥೆಯು ಸ್ಥಿರಗೊಂಡಿದ್ದರೂ ಸಹ, ನಿವಾಸಿಗಳಿಗೆ ಯಾವುದೇ ಅನಾನುಕೂಲತೆ ಉಂಟಾಗದಂತೆ ಅದನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದು ಯುಐಡಿಎಐ ಹೇಳಿದೆ. ಈ ವರ್ಷ ಆಗಸ್ಟ್ 20 ರಂದು ಉನ್ನತೀಕರಣ ಪ್ರಕ್ರಿಯೆ ಆರಂಭವಾದಾಗಿನಿಂದ ಕಳೆದ 9 ದಿನಗಳಲ್ಲಿ 51 ಲಕ್ಷಕ್ಕೂ ಹೆಚ್ಚು ಮಂದಿ ದಾಖಲಾಗಿದ್ದಾರೆ. ಪ್ಯಾನ್/ಇಪಿಎಫ್‌ಒ ಜೊತೆ ಆಧಾರ್ ಲಿಂಕ್ ಮಾಡುವಲ್ಲಿ ಯುಐಡಿಎಐ ಸಿಸ್ಟಮ್ ಸ್ಥಗಿತವಾಗಿದೆ ಎಂಬ ಕೆಲವು ಮಾಧ್ಯಮ ವರದಿಗಳು ಸತ್ಯಕ್ಕೆ ದೂರವಾಗಿವೆ ಎಂದು ಯುಐಡಿಎಐ ಹೇಳಿದೆ.
EPFO ಜೊತೆ ಆಧಾರ್ ಲಿಂಕ್ ಮಾಡುವುದು ಮುಂದಿನ ತಿಂಗಳಿನಿಂದ ಕಡ್ಡಾಯ
ಸೆಪ್ಟೆಂಬರ್‌ನಿಂದ, ನಿಮ್ಮ ಆಧಾರ್ ಅನ್ನು ನಿಮ್ಮ ಸಾರ್ವತ್ರಿಕ ಖಾತೆ ಸಂಖ್ಯೆಗೆ (UAN) ಲಿಂಕ್ ಮಾಡಿದರೆ ಮಾತ್ರ ಉದ್ಯೋಗದಾತರು ನಿಮ್ಮ ಭವಿಷ್ಯ ನಿಧಿ (PF) ಖಾತೆಗೆ ತಮ್ಮ ಕೊಡುಗೆಯನ್ನು ಸಲ್ಲಿಸಲು ಸಾಧ್ಯವಾಗುತ್ತದೆ. ಪಿಎಫ್ ಖಾತೆದಾರರು ತಮ್ಮ ಆಧಾರ್ ಅನ್ನು ತಮ್ಮ ಯುಎಎನ್‌ಗೆ ಲಿಂಕ್ ಮಾಡಿದ್ದರೆ ಮಾತ್ರ ಸಂಪೂರ್ಣ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ. ಈ ಲಿಂಕ್ ಪ್ರಕ್ರಿಯೆಯನ್ನು ಪೂರ್ಣಗೊಳಿಸದೆ, ಉದ್ಯೋಗಿ ಅಥವಾ ಉದ್ಯೋಗದಾತರ ಕೊಡುಗೆಯನ್ನು ಪಿಎಫ್ ಖಾತೆಗಳಲ್ಲಿ ಜಮಾ ಮಾಡಲಾಗುವುದಿಲ್ಲ.
ಪ್ಯಾನ್-ಆಧಾರ್ ಲಿಂಕ್ ಗಡುವು
ಸರ್ಕಾರವು ಪ್ಯಾನ್ ಮತ್ತು ಆಧಾರ್ ಲಿಂಕ್ ಅನ್ನು ಜೂನ್ 30 ರಿಂದ 30 ಸೆಪ್ಟೆಂಬರ್ ವರೆಗೆ ವಿಸ್ತರಿಸಿದೆ. ಸೆಕ್ಷನ್ 139 ಎಎ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಆದಾಯ ತೆರಿಗೆ ರಿಟರ್ನ್‌ನಲ್ಲಿ ಆಧಾರ್ ಸಂಖ್ಯೆಯನ್ನು ಉಲ್ಲೇಖಿಸುವುದು ಮತ್ತು ಪ್ಯಾನ್ ಹಂಚಿಕೆಗೆ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ.