ದೇಶದಲ್ಲಿ ಅತಿ ಹೆಚ್ಚು ಸಂಖ್ಯೆಯ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿರುವ ರೈಲ್ವೇ ಇಲಾಖೆ, ಉದ್ಯೋಗ ಕಡಿತ ಮಾಡುವುದಲ್ಲದೆ ಹೊಸ ನೇಮಕಾತಿಗಳಿಗೆ ತಡೆ ನೀಡಿದೆ ಎಂದು ಹೇಳಲಾಗಿತ್ತು. ಇದೀಗ ಈ ಕುರಿತು ರೈಲ್ವೇ ಇಲಾಖೆಯಿಂದ ಮಹತ್ವದ ಮಾಹಿತಿ ಹೊರ ಬಿದ್ದಿದೆ.
ಯಾವುದೇ ಉದ್ಯೋಗ ಕಡಿತ ಮಾಡುವುದಿಲ್ಲ. ಆದರೆ ಉದ್ಯೋಗಿಗಳ ಹುದ್ದೆಯಲ್ಲಿ ಬದಲಾವಣೆ ಮಾಡುವುದಾಗಿ ತಿಳಿಸಿದೆ. ಅಲ್ಲದೇ ನೇಮಕಾತಿ ಪ್ರಕ್ರಿಯೆಗಳನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದ್ದು, ಪರಿಣಿತರಲ್ಲದವರಿಗೆ ಪರಿಣಿತಿ ಹೊಂದುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗಿದೆ.
ಪ್ರಸ್ತುತ ರೈಲ್ವೇ ಇಲಾಖೆಯಲ್ಲಿ 12,18,335 ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದು, ಇಲಾಖೆಯ ಶೇ.65 ರಷ್ಟು ಆದಾಯ ವೇತನಕ್ಕಾಗಿಯೇ ವೆಚ್ಚವಾಗುತ್ತಿದೆ. ಆದರೆ ಕೊರೊನಾ ಕಾರಣಕ್ಕಾಗಿ ಲಾಕ್ ಡೌನ್ ಜಾರಿಯಾದ ಕಾರಣ ಸಂಚಾರವನ್ನು ಸ್ಥಗಿತಗೊಳಿಸಿದ ಪರಿಣಾಮ ತೀವ್ರ ಆರ್ಥಿಕ ನಷ್ಟವುಂಟಾಗಿದೆ.
ಲಾಕ್ ಡೌನ್ ಸಡಿಲಿಕೆ ಬಳಿಕ ಸಂಚಾರ ಪುನಾರಂಭಿಸಲಾಗಿತ್ತಾದರೂ ಇದೀಗ ಕೊರೊನಾ ವ್ಯಾಪಕವಾಗುತ್ತಿರುವ ಕಾರಣ ರೈಲು ಸಂಚಾರವನ್ನು ಮತ್ತೆ ರದ್ದುಗೊಳಿಸಲಾಗಿದೆ. ಹೀಗಾಗಿ ವೆಚ್ಚ ಕಡಿತಕ್ಕೆ ಕಡಿವಾಣ ಹಾಕುಲು ಹಲವು ಕ್ರಮಗಳನ್ನು ಕೈಗೊಳ್ಳಲು ಇಲಾಖೆ ಮುಂದಾಗಿದೆ ಎನ್ನಲಾಗಿದೆ.
ಹೀಗಾಗಿ ರೈಲ್ವೆ ಇಲಾಖೆ ತಾತ್ಕಾಲಿಕವಾಗಿ ತನ್ನ ನೇಮಕಾತಿ ನಿಲ್ಲಿಸಿದೆ. ಭದ್ರತೆ ಕ್ಷೇತ್ರ ಬಿಟ್ಟು ರೈಲ್ವೆ ಇಲಾಖೆ ಎಲ್ಲ ಹುದ್ದೆಗಳ ನೇಮಕವನ್ನು ಸದ್ಯ ರದ್ದು ಮಾಡಿದೆ. ಸೇಪ್ಟಿ ಹೊರತುಪಡಿಸಿ ಬೇರೆ ಯಾವುದೇ ಹುದ್ದೆಗಳ ನೇಮಕಾತಿ ನಡೆಯುವುದಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ ಖಾಲಿ ಇರುವ 1,40,640 ಉದ್ಯೋಗಗಳಿಗೆ ನೇಮಕಾತಿ ನಡೆಯುವುದಿಲ್ಲ.