ನವದೆಹಲಿ: ‘ಆಧಾರ್ ಕಾರ್ಡ್’ ಇಲ್ಲದ ಫಲಾನುಭವಿಗಳಿಗೆ ‘ಕೊರೋನಾ ಲಸಿಕೆ’ ನಿರಾಕರಿಸುವಂತಿಲ್ಲ. ಯೋಜನೆಗಳಿಗೆ ಫಲಾನುಭವಿಯ ಆಯ್ಕೆ ವೇಳೆ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ(UIDAI) ತಿಳಿಸಿದೆ.
ದೇಶದಲ್ಲಿ ಕೊರೊನಾದಿಂದ ಸಂಕಷ್ಟ ಉಂಟಾಗಿರುವ ಹಿನ್ನೆಲೆಯಲ್ಲಿ ಆಧಾರ್ ಕಾರ್ಡ್ ಇಲ್ಲದಿದ್ದರೂ ಫಲಾನುಭವಿಗಳನ್ನು ಗುರುತಿಸಬಹುದಾಗಿದೆ ಎಂದು ಆದೇಶ ಹೊರಡಿಸಲಾಗಿದೆ. ಆಧಾರ್ ಇಲ್ಲದ ವ್ಯಕ್ತಿಗೆ ಕೊರೋನಾ ಲಸಿಕೆ ಅಥವಾ ಕೊರೋನಾ ಸಂಬಂಧಿತ ಸೇವೆಯನ್ನು ನಿರಾಕರಿಸಲಾಗುವುದಿಲ್ಲವೆಂದು ತಿಳಿಸಲಾಗಿದೆ.
ಯಾವುದೇ ಅಗತ್ಯತೆಯನ್ನು ನೀಡುವ ಸಂದರ್ಭದಲ್ಲಿ ಆಧಾರ್ ಇಲ್ಲದ ಕಾರಣಕ್ಕೆ ನಿರಾಕರಿಸಬಾರದು. ಕೊರೋನಾ ಲಸಿಕೆ, ಔಷಧ, ಆಸ್ಪತ್ರೆಗೆ ದಾಖಲಾಗಲು ಮತ್ತು ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಆಧಾರ್ ಕಡ್ಡಾಯವಾಗುವುದಿಲ್ಲ. ಆಧಾರ್ ಇಲ್ಲದಿದ್ದರೆ ಅಥವಾ ಕೆಲವು ಕಾರಣದಿಂದ ಆಧಾರ್ ಆನ್ಲೈನ್ ಪರಿಶೀಲನೆ ಯಶಸ್ವಿಯಾಗದಿದ್ದರೂ ಸಂಬಂಧಿಸಿದ ಸಂಸ್ಥೆ ಅಥವಾ ಇಲಾಖೆ ಆಧಾರ್ ಕಾಯ್ದೆ ಅನ್ವಯ ಸೇವೆಯನ್ನು ಒದಗಿಸಬೇಕಾಗುತ್ತದೆ.
ಆಧಾರ್ ಇಲ್ಲದ ಕಾರಣಕ್ಕೆ ಯಾವುದೇ ಸೇವೆ ಅಥವಾ ಸೌಲಭ್ಯ ನೀಡಲು ನಿರಾಕರಿಸಿದಲ್ಲಿ ಸಂಬಂಧಿಸಿದ ಇಲಾಖೆಗಳ ಉನ್ನತ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಹೇಳಲಾಗಿದೆ.