ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಇಂಡಿಯಾ ಟುಡೇ ಕಾನ್ಕ್ಲೇವ್ 2021 ರಲ್ಲಿ ಮಾತನಾಡಿ, ಪೆಟ್ರೋಲ್, ಡೀಸೆಲ್ ಆಮದನ್ನು ಕಡಿಮೆ ಮಾಡಬೇಕು ಮತ್ತು ಮಾಲಿನ್ಯವನ್ನು ಕೂಡ ಕಡಿಮೆ ಮಾಡಬೇಕು ಎಂದು ಹೇಳಿದರು.
ಒಂದು ವೇಳೆ ಬಲವಂತವಾಗಿದ್ದರೆ ನಾವು ಜೈವಿಕ ಇಂಧನಗಳು, ಎಥೆನಾಲ್, ಮೆಥನಾಲ್, ಎಲೆಕ್ಟ್ರಿಕ್ ವಾಹನಗಳು, ಜೈವಿಕ ಡೀಸೆಲ್, ಸಿ.ಎನ್.ಜಿ. ಮತ್ತು ಎಲ್.ಎನ್.ಜಿ, ಎಲ್.ಪಿ.ಜಿ. ಬಳಸುತ್ತೇವೆ. ಆದರೆ, ಪೆಟ್ರೋಲ್ ಮತ್ತು ಡೀಸೆಲ್ ಏಕಸ್ವಾಮ್ಯಕ್ಕೆ ಅವಕಾಶ ನೀಡುವುದಿಲ್ಲ ಎಂದರು.
ದೆಹಲಿಯಲ್ಲಿ ತುಂಬಾ ಮಾಲಿನ್ಯವಿದೆ. ವೈದ್ಯರ ಬಳಿಗೆ ಹೋದಾಗ 50 ರಷ್ಟು ರೋಗಗಳು ವಾಯು ಮಾಲಿನ್ಯ ಮತ್ತು ನೀರಿನ ಮಾಲಿನ್ಯದಿಂದ ಉಂಟಾಗುತ್ತವೆ ಎಂದು ಗೊತ್ತಾಗುತ್ತದೆ. ಈ ಕಾರಣಗಳಿಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಬದಲು ಪರ್ಯಾಯ ವ್ಯವಸ್ಥೆ ಮಾಡಲಾಗುವುದು. ಹಸಿರು ಜಲಜನಕ ಭವಿಷ್ಯದ ಇಂಧನವಾಗಿದೆ. ಹಸಿರು ಹೈಡ್ರೋಜನ್ ರಫ್ತಿನಲ್ಲಿ ಜಗತ್ತಿನಲ್ಲಿ ಭಾರತವು ಅತಿದೊಡ್ಡ ಶಕ್ತಿಯಾಗಲಿದೆ. ಪ್ರಧಾನಿ ಮೋದಿ ಹೊಸ ನಿರ್ದೇಶನ ನೀಡಿದ್ದಾರೆ. ನಾವು ವಿಶ್ವ ನಾಯಕರಾಗುತ್ತೇವೆ. ಹಸಿರು ಜಲಜನಕಕ್ಕೆ ಉತ್ತೇಜನ ನೀಡಲಾಗ್ತಿದೆ ಎಂದಿದ್ದಾರೆ.
ಅದೇ ಸಮಯದಲ್ಲಿ, ನಾವು ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಬಳಸಿ ದೇಶವನ್ನು ಕಲುಷಿತಗೊಳಿಸುತ್ತಿದ್ದೇವೆ ಎಂದು ಹೇಳಿದ ನಿತಿನ್ ಗಡ್ಕರಿ, ನಾವು ಈ ದೇಶವನ್ನು ಎಲ್ಲಾ ಮೂರು ರೀತಿಯ ಮಾಲಿನ್ಯದಿಂದ ರಕ್ಷಿಸಬೇಕಾಗಿದೆ ಎಂದು ತಿಳಿಸಿದರು.
ಆಟೋಮೊಬೈಲ್ ಕ್ಷೇತ್ರವು ನಮಗೆ ಬಹಳ ಮುಖ್ಯವಾಗಿದೆ. ಕ್ಷೇತ್ರದ ವಹಿವಾಟು ಪ್ರಸ್ತುತ 7.5 ಲಕ್ಷ ಕೋಟಿ ರೂ.ಆಗಿದ್ದು, ಇದು ಜಿಡಿಪಿಗೆ 7.1 ರಷ್ಟು ಕೊಡುಗೆ ನೀಡುತ್ತದೆ. ಇದು ಭಾರತದ ನಂಬರ್ ಒನ್ ವಲಯವಾಗಿದ್ದು, 5 ಕೋಟಿ ಜನರಿಗೆ ಉದ್ಯೋಗ ಒದಗಿಸುತ್ತಿದೆ. ನಮ್ಮ ತಂಡವು ಈ ವಲಯವನ್ನು ವಿಶ್ವದಲ್ಲೇ ಪ್ರಥಮ ಸ್ಥಾನದಲ್ಲಿರಿಸಲು ಕೆಲಸ ಮಾಡುತ್ತಿದೆ. ಎಲ್ಲಾ ಹೆಸರಾಂತ ಕಂಪನಿಗಳು ಭಾರತದಲ್ಲಿವೆ. ಮುಂದಿನ ಐದು ವರ್ಷಗಳಲ್ಲಿ ನಾವು ಆಟೋ ಕ್ಷೇತ್ರದಲ್ಲಿ ನಂಬರ್ ಒನ್ ಆಗುತ್ತೇವೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ.