ಭಾರತದ ರಸ್ತೆಗಳಲ್ಲಿ 15 ವರ್ಷಕ್ಕಿಂತ ಹಳೆಯ 4 ಕೋಟಿಗಿಂತಲೂ ಹೆಚ್ಚು ಕಾರುಗಳು ಓಡಾಡುತ್ತಿವೆ. ಈ ಎಲ್ಲ ವಾಹನಗಳು ಹಸಿರು ತೆರಿಗೆ ವ್ಯಾಪ್ತಿಗೆ ಬರುತ್ತವೆ. ಕರ್ನಾಟಕದ ರಸ್ತೆಯಲ್ಲಿ ಹೆಚ್ಚು ಹಳೆ ವಾಹನಗಳು ಓಡಾಡುತ್ತಿವೆ. ಕರ್ನಾಟಕದಲ್ಲಿ ಹಳೆಯ ವಾಹನಗಳ ಸಂಖ್ಯೆ 70 ಲಕ್ಷಕ್ಕೂ ಹೆಚ್ಚಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಸಾರಿಗೆ ವಾಹನಗಳ ಪಟ್ಟಿಯನ್ನು ಡಿಜಿಟಲೀಕರಣಗೊಳಿಸಿದೆ. ಆದರೆ ಆಂಧ್ರಪ್ರದೇಶ, ಮಧ್ಯಪ್ರದೇಶ, ತೆಲಂಗಾಣ, ಲಕ್ಷದ್ವೀಪಗಳ ಮಾಹಿತಿಯ ಕೊರತೆಯಿಂದಾಗಿ ಇವು ಪಟ್ಟಿಯಲ್ಲಿ ಸೇರಿಲ್ಲ. ಹಳೆಯ ವಾಹನಗಳ ವಿಷಯದಲ್ಲಿ ಯುಪಿ ಎರಡನೇ ಮತ್ತು ದೆಹಲಿ ಮೂರನೇ ಸ್ಥಾನದಲ್ಲಿದೆ.
ಹಳೆಯ ವಾಹನಗಳಿಗೆ ಹಸಿರು ತೆರಿಗೆ ವಿಧಿಸುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ, ರಾಜ್ಯಗಳಿಗೆ ಕಳುಹಿಸಿದೆ. ಅಂಕಿಅಂಶಗಳ ಪ್ರಕಾರ, 4 ಕೋಟಿಗೂ ಹೆಚ್ಚಿನ ವಾಹನಗಳು 15 ವರ್ಷಕ್ಕಿಂತ ಹಳೆಯವು. ಈ ಪೈಕಿ 2 ಕೋಟಿ ವಾಹನಗಳು 20 ವರ್ಷಕ್ಕಿಂತ ಹಳೆಯವು.
2021 ರ ಜನವರಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಳೆಯ ಮಾಲಿನ್ಯಕಾರಕ ವಾಹನಗಳಿಗೆ ಹಸಿರು ತೆರಿಗೆ ವಿಧಿಸಲು ಪ್ರಸ್ತಾಪಿಸಿದ್ದರು. ಈ ಪ್ರಸ್ತಾಪವನ್ನು ರಾಜ್ಯಗಳಿಗೆ ಕಳುಹಿಸಲಾಗಿದೆ. ರಾಜ್ಯಗಳ ಒಪ್ಪಿಗೆಯ ನಂತರ ಇದನ್ನು ಅಧಿಕೃತಗೊಳಿಸಲಾಗುವುದು. ಯೋಜನೆಯಡಿಯಲ್ಲಿ ಫಿಟ್‌ನೆಸ್ ಪ್ರಮಾಣೀಕರಣವನ್ನು ನವೀಕರಿಸುವ ಸಮಯದಲ್ಲಿ, 8 ವರ್ಷಕ್ಕಿಂತ ಹಳೆಯದಾದ ವಾಹನಗಳ ಮೇಲೆ, ರಸ್ತೆ ತೆರಿಗೆಯ ಶೇಕಡಾ 10 ರಿಂದ ಶೇಕಡಾ 25 ರಷ್ಟು ತೆರಿಗೆಯನ್ನು ವಿಧಿಸಬಹುದು. ಸಾರ್ವಜನಿಕ ಸಾರಿಗೆ ವಾಹನಗಳಿಗೆ ಕಡಿಮೆ ಹಸಿರು ತೆರಿಗೆ ವಿಧಿಸಲಾಗುತ್ತದೆ. ಹೆಚ್ಚು ಕಲುಷಿತ ನಗರಗಳಲ್ಲಿ, ರಸ್ತೆ ತೆರಿಗೆಯ ಶೇಕಡಾ 50ರಷ್ಟು ಹಸಿರು ತೆರಿಗೆಯನ್ನು ವಿಧಿಸಲು ನಿರ್ಧರಿಸಲಾಗ್ತಿದೆ.