ಕೇಂದ್ರ ಸಚಿವ ನಿತಿನ್ ಗಡ್ಕರಿ ಲೋಕಸಭೆಯಲ್ಲಿ ಬಹುದೊಡ್ಡ ಘೋಷಣೆಯನ್ನ ಮಾಡಿದ್ದಾರೆ. ಕೇಂದ್ರ ಸರ್ಕಾರ ಮುಂದಿನ ಒಂದು ವರ್ಷದಲ್ಲಿ ದೇಶದಲ್ಲಿ ಎಲ್ಲಾ ಟೋಲ್ ಪ್ಲಾಜಾಗಳನ್ನ ರದ್ದು ಮಾಡುವ ಯೋಜನೆಯ ಮೇಲೆ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಟೆಕ್ನಾಲಜಿ ಮೂಲಕವೇ ಟೋಲ್ ಶುಲ್ಕ ಪಾವತಿ ಮಾಡುವ ವ್ಯವಸ್ಥೆಯನ್ನ ಜಾರಿ ಮಾಡಲಿದ್ದೇವೆ ಎಂದು ಹೇಳಿದ್ದಾರೆ.
ಅಮರೋಹಾದ ಬಿಎಸ್ಪಿ ಸಂಸದ ಕುಂವರ್ ದಾನಿಶ್ ಅಲಿ ಮುಕ್ತೇಶ್ವರ ಬಳಿ ರಸ್ತೆಯಲ್ಲಿರುವ ಟೋಲ್ ಪ್ಲಾಜಾ ವಿಚಾರವನ್ನ ಪ್ರಸ್ತಾಪಿಸಿದ ವೇಳೆ ಉತ್ತರಿಸಿದ ನಿತಿನ್ ಗಡ್ಕರಿ, ಟೋಲ್ ಕೊನೆಗೊಳಿಸುವುದು ಎಂದರೆ ಟೋಲ್ ಪ್ಲಾಜಾವನ್ನು ಕೊನೆಗೊಳಿಸುವುದು ಎಂದು ಹೇಳಿದ್ದಾರೆ. ಈಗ ಸರ್ಕಾರವು ಅಂತಹ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಜಿಪಿಎಸ್ ಸಹಾಯದಿಂದ ವಾಹನ ಟೋಲ್ ಶುಲ್ಕವಿರುವ ರಸ್ತೆಯನ್ನು ಏರುವ ಹಾಗೂ ಹೊರ ಹೋಗುವ ಫೋಟೋ ತೆಗೆದುಕೊಳ್ಳುತ್ತದೆ. ಇದರ ಆಧಾರದ ಮೇಲೆ ಶುಲ್ಕ ವಿಧಿಸಲಾಗುತ್ತದೆ ಎಂದರು.
ಹಿಂದಿನ ಸರ್ಕಾರಗಳ ಅವಧಿಯಲ್ಲಿ ಇಂತಹ ಟೋಲ್ ಪ್ಲಾಜಾಗಳನ್ನ ನಿರ್ಮಿಸಲಾಗಿದೆ. ಫಾಸ್ಟ್ಟ್ಯಾಗ್ ವ್ಯವಸ್ಥೆ ದೇಶದಲ್ಲಿ ಸಂಪೂರ್ಣವಾಗಿ ಜಾರಿಗೆ ಬಂದ ಬಳಿಕ ಟೋಲ್ ತೆಗೆದುಕೊಳ್ಳುವ ಈಗಿನ ವ್ಯವಸ್ಥೆಯನ್ನ ಸಂಪೂರ್ಣವಾಗಿ ಬಂದ್ ಮಾಡುತ್ತೇವೆ. ಟೋಲ್ ಪ್ಲಾಜಾಗಳ ಬದಲಾಗಿ ಟೆಕ್ನಾಲಜಿಯನ್ನ ಬಳಸೋಕೆ ನಾವು ಸಿದ್ಧತೆ ಮಾಡುತ್ತಿದ್ದೇವೆ. ಜಿಪಿಎಸ್ ಸಹಾಯದಿಂದ ಕ್ಯಾಮರಾ ಎಲ್ಲಿಂದ ನೀವು ಹೆದ್ದಾರಿ ಬಳಕೆ ಆರಂಭಿಸಿದ್ದೀರಿ ಅನ್ನೋದನ್ನ ಫೋಟೋ ತೆಗೆದುಕೊಳ್ಳುತ್ತೆ ಹಾಗೂ ನೀವು ಯಾವ ಸ್ಥಳದಿಂದ ಹೆದ್ದಾರಿಯಿಂದ ನಿರ್ಗಮಿಸಿದ್ದೀರಿ ಎಂಬ ಫೋಟೋ ಕೂಡ ಕ್ಲಿಕ್ಕಿಸಲಾಗುತ್ತೆ. ಇದನ್ನೆ ಆಧರಿಸಿ ಜಿಪಿಎಸ್ ಸಹಾಯದಿಂದ ನಿಮ್ಮ ಟೋಲ್ ಶುಲ್ಕ ಡಿಜಿಟಲ್ ವಿಧಾನದಲ್ಲಿ ಪಾವತಿಯಾಗಲಿದೆ ಎಂದು ಹೇಳಿದ್ರು.