ಮುಂಬೈ: ಸಣ್ಣ ಉದ್ದಿಮೆದಾರರು ಹಾಗೂ ಮಹಿಳಾ ಉದ್ಯಮಿಗಳಿಗೆ ಕೇಂದ್ರ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳ ಖಾತೆ ಸಚಿವ ನಿತಿನ್ ಗಡ್ಕರಿ ಸಿಹಿಸುದ್ದಿ ನೀಡಿದ್ದಾರೆ.
ಫಿಕ್ಕಿ ಮಹಿಳಾ ವಿಭಾಗ ವತಿಯಿಂದ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ಬ್ಯಾಂಕ್ ಸಂಸ್ಥಾಪಕ ನೊಬೆಲ್ ಪ್ರಶಸ್ತಿ ಪುರಸ್ಕೃತ ಮಹಮ್ಮದ್ ಯೂನಸ್ ಅವರೊಂದಿಗೆ ಮಾತುಕತೆ ಸಂದರ್ಭದಲ್ಲಿ ಇಂತಹ ಆಲೋಚನೆ ಮೂಡಿದ್ದು ಕೇಂದ್ರ ಹಣಕಾಸು ಸಚಿವಾಲಯದೊಂದಿಗೆ ಚರ್ಚೆ ನಡೆಸಿ ಈ ಬಗ್ಗೆ ವಿಸ್ತೃತ ಮಾಹಿತಿ ನೀಡಲಾಗುವುದು ಎಂದು ಹೇಳಿದ್ದಾರೆ.
ಮಹಿಳಾ ಉದ್ಯಮಿಗಳು ಮತ್ತು ಸಣ್ಣ ಉದ್ಯಮಿಗಳಿಗೆ ತಕ್ಷಣಕ್ಕೆ 10 ಲಕ್ಷ ರೂಪಾಯಿವರೆಗೆ ಸಾಲ ನೀಡಲು ಸಾಮಾಜಿಕ ಕಿರು ಹಣಕಾಸು ಸಂಸ್ಥೆಗಳನ್ನು ಸೃಷ್ಟಿಸುವ ಆಲೋಚನೆ ಸರ್ಕಾರಕ್ಕೆ ಇದೆ. 3 ದಿನದಲ್ಲಿ ಮಹಿಳಾ ಉದ್ಯಮಿಗಳಿಗೆ 10 ಲಕ್ಷ ರೂಪಾಯಿವರೆಗೆ ಸಾಲ ನೀಡುವ ವ್ಯವಸ್ಥೆಯನ್ನು ರೂಪಿಸಲಾಗುವುದು. ಸರಳ ಪ್ರಕ್ರಿಯೆಗಳೊಂದಿಗೆ ಸಣ್ಣ ಹಾಗೂ ಅತಿ ಸಣ್ಣ ಸಾಮಾಜಿಕ ಉದ್ಯಮಿಗಳಿಗಾಗಿ ಈ ಯೋಜನೆ ರೂಪಿಸಲಾಗುವುದು ಎಂದು ಹೇಳಿದ್ದಾರೆ.
ನೀತಿ ಆಯೋಗದ ಶಿಫಾರಸು ಆಧರಿಸಿ ಯೋಜನೆ ರೂಪಿಸಲಿದ್ದು ಮಹಿಳಾ ಉದ್ಯಮಿಗಳಿಗೆ ಸುಲಭವಾಗಿ ಸಾಲ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.