
ನವದೆಹಲಿ: ಹೈವೇಗಳಲ್ಲಿ ವೇಗದ ಮಿತಿಯನ್ನು ಗಂಟೆಗೆ 140 ಕಿಲೋಮೀಟರ್ ಗೆ ಏರಿಕೆ ಮಾಡಲು ಸಾರಿಗೆ ಸಚಿವ ನಿತಿನ್ ಗಡ್ಕರಿ ಒಲವು ತೋರಿದ್ದಾರೆ. ಶೀಘ್ರವೇ ಕಾನೂನಿಗೆ ತಿದ್ದುಪಡಿ ತರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಎಕ್ಸ್ ಪ್ರೆಸ್ ವೇಗಳಲ್ಲಿ ಸಂಚರಿಸುವ ವಾಹನಗಳ ವೇಗದ ಮಿತಿಯನ್ನು ಗಂಟೆಗೆ 140 ಕಿಲೋಮೀಟರ್ ಗೆ ಹೆಚ್ಚಳ ಮಾಡಲು ಶೀಘ್ರದಲ್ಲೇ ಸಂಸತ್ತಿನಲ್ಲಿ ವಿಧೇಯಕ ಮಂಡಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಯಾವುದೇ ವಾಹನವನ್ನು ವೇಗವಾಗಿ ಓಡಿಸಿದರೆ ಅಪಘಾತ ಸಂಭವಿಸುತ್ತವೆ ಎಂಬ ಕಲ್ಪನೆ ಇದೆ. ರಸ್ತೆಗಳ ಅನ್ವಯ ವೇಗದ ಮಿತಿ ನಿಗದಿ ಮಾಡಬೇಕಿದೆ. ಅನೇಕ ರೀತಿಯ ರಸ್ತೆಗಳಲ್ಲಿ ವಿವಿಧ ರೀತಿಯ ವೇಗದ ಮಿತಿ ನಿರ್ಧರಿಸಬೇಕೆಂಬುದು ನನ್ನ ನಿಲುವಾಗಿದೆ. ಎಕ್ಸ್ ಪ್ರೆಸ್ ವೇ ಗಳಲ್ಲಿ ಗಂಟೆಗೆ 140 ಕಿಲೋಮೀಟರ್, ಚತುಷ್ಪಥದ ಹೆದ್ದಾರಿಗಳಲ್ಲಿ ಗಂಟೆಗೆ 100 ಕಿಲೋಮೀಟರ್, ದ್ವಿಪಥದ ಹೆದ್ದಾರಿಗಳಲ್ಲಿ ಗಂಟೆಗೆ 80 ಕಿಲೋಮೀಟರ್, ನಗರದ ರಸ್ತೆಗಳಲ್ಲಿ 75 ಕಿಲೋಮೀಟರ್ ವೇಗದ ಮಿತಿ ನಿಗದಿಪಡಿಸುವ ಕುರಿತಂತೆ ಕ್ರಮಕೈಗೊಳ್ಳಲಾಗುತ್ತದೆ. ಎಕ್ಸ್ ಪ್ರೆಸ್ ವೇ ಗಳಲ್ಲಿ ಸುರಕ್ಷತಾ ಕ್ರಮಕೈಗೊಳ್ಳಲಾಗಿದೆ ಹಾಗಾಗಿ ವೇಗದ ಮಿತಿ ಹೆಚ್ಚಳವಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.