ನವದೆಹಲಿ: ಮೂರು ವರ್ಷಗಳಲ್ಲೇ ಮಹತ್ವದ ಜಿಎಸ್ಟಿ ಕೌನ್ಸಿಲ್ ಸಭೆ ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದಿದೆ.
ತೆರಿಗೆ ಪಾವತಿಯನ್ನು ಬಾಕಿ ಉಳಿಸಿಕೊಂಡವರ ವಿಳಂಬ ಶುಲ್ಕವನ್ನು ಕಡಿಮೆ ಮಾಡಲಾಗಿದೆ. ಅದೇ ರೀತಿ ತೆರಿಗೆ ಪಾವತಿಸದವರಿಗೆ ವಿಳಂಬ ಶುಲ್ಕವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ವಾರ್ಷಿಕವಾಗಿ 5 ಕೋಟಿ ರೂಪಾಯಿ ವಹಿವಾಟು ನಡೆಸುವವರು ವಿಳಂಬವಾಗಿ ಜಿಎಸ್ಟಿ ರಿಟರ್ನ್ ಸಲ್ಲಿಸಿರುವುದಕ್ಕೆ ಬಡ್ಡಿ ವಿಧಿಸುತ್ತಿದ್ದು, ಇದನ್ನು ಶೇಕಡ 50 ರಷ್ಟು ಕಡಿಮೆ ಮಾಡಲಾಗಿದೆ.
ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಜಿಎಸ್ಟಿ ರಿಟರ್ನ್ ಕಲಿಕೆಯನ್ನು ವಿಳಂಬ ಮಾಡಿದವರಿಗೆ ವಿಧಿಸುವ ಬಡ್ಡಿಯನ್ನು ಶೇಕಡ 18 ರಿಂದ ಶೇಕಡ 9 ಕ್ಕೆ ಇಳಿಕೆ ಮಾಡಲಾಗಿದ್ದು, ಸೆಪ್ಟಂಬರ್ ತಿಂಗಳವರೆಗೂ ಇದು ಅನ್ವಯವಾಗುತ್ತದೆ.
ಜಿಎಸ್ಟಿ ಮಂಡಳಿ ಸಭೆಯ ನಂತರ ಈ ಕುರಿತಾಗಿ ಮಾಹಿತಿ ನೀಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮೇ, ಜೂನ್ ಮತ್ತು ಜುಲೈ ತಿಂಗಳ ಜಿಎಸ್ಟಿ ರಿಟರ್ನ್ ಸಲ್ಲಿಕೆ ಸೆಪ್ಟೆಂಬರ್ ವರೆಗೆ ವಿಸ್ತರಿಸಲಾಗಿದೆ. ಈ ಅವಧಿಯಲ್ಲಿ ಯಾವುದೇ ಬಡ್ಡಿ ಅಥವಾ ವಿಳಂಬ ಶುಲ್ಕ ಪಾವತಿಸದೆ ಜಿಎಸ್ಟಿ ರಿಟರ್ನ್ ಸಲ್ಲಿಕೆ ಮಾಡಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಅದೇ ರೀತಿ ತೆರಿಗೆ ಬಾಕಿ ಇಲ್ಲದ ನೊಂದಾಯಿತ ಸಂಸ್ಥೆಗಳು ಜಿಎಸ್ಟಿ ರಿಟರ್ನ್ ಸಲ್ಲಿಕೆ ಮಾಡದಿದ್ದರೆ ವಿಳಂಬ ಶುಲ್ಕ ವಿಧಿಸುವುದಿಲ್ಲ. ಪ್ರತಿ ತಿಂಗಳ ಮಾರಾಟ ರಿಟರ್ನ್ ಸಲ್ಲಿಕೆ ಮಾಡದವರಿಗೆ ವಿಳಂಬ ಶುಲ್ಕವನ್ನು ಗರಿಷ್ಠ 500 ರೂಪಾಯಿವರೆಗೆ ನಿಗದಿಗೊಳಿಸಲಾಗಿದೆ.