ಕೋಟಾ(ರಾಜಸ್ಥಾನ): ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿಯಲ್ಲಿ 9,000 ರೈತರಿಗೆ ಕೇವಲ ಒಂದು ದಿನದಲ್ಲಿ ಒಟ್ಟು 1,500 ಕೋಟಿ ರೂ. ಮೊತ್ತದ ಸಾಲದ ಚೆಕ್ ಗಳನ್ನು ನೀಡುವುದಾಗಿ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.
ಭಾನುವಾರ ಕೋಟಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರೊಂದಿಗೆ ಸಚಿವರು ಭಾಗವಹಿಸಿದ್ದರು.
ಕೋಟಾದಲ್ಲಿ, ಸೀತಾರಾಮನ್ ಅವರು ಪಿಎಂ ಸ್ವನಿಧಿ ಯೋಜನೆಯಡಿ 2,363 ಕ್ಕೂ ಹೆಚ್ಚು ರೈತರಿಗೆ ಒಂದೇ ದಿನದಲ್ಲಿ 3 ಕೋಟಿ ರೂ.ಗಿಂತ ಹೆಚ್ಚಿನ ಸಾಲ ಮಂಜೂರು ಮಾಡಿದೆ. ಒಟ್ಟಾರೆಯಾಗಿ 9,000 ರೈತರಿಗೆ ಬೆಳೆ ಸಾಲ, ಟ್ರ್ಯಾಕ್ಟರ್ ಖರೀದಿ ಸಾಲ, ಇತರ ಸಾಲಗಳನ್ನು ನೀಡುತ್ತೇವೆ. ಮುದ್ರಾ ಸಾಲದ ಅಡಿಯಲ್ಲಿ, 3,700 ಕ್ಕೂ ಹೆಚ್ಚು ಮಹಿಳೆಯರು ಮತ್ತು ಪುರುಷರು 40 ಕೋಟಿ ರೂ. ಮೊತ್ತದ ಸಾಲವನ್ನು ಪಡೆಯುತ್ತಾರೆ ಎಂದು ಅವರು ಹೇಳಿದರು.
ರೈತರಿಗೆ ಟ್ರ್ಯಾಕ್ಟರ್‌ಗಳನ್ನು ಖರೀದಿಸಲು ಅನುಕೂಲವಾಗುವಂತೆ ಅನೇಕ ಬ್ಯಾಂಕ್ ಗಳು ಮಳಿಗೆಗಳನ್ನು ಹೊಂದಿವೆ ಎಂದ ಅವರು, ಇದೇ ಸಂದರ್ಭದಲ್ಲಿ, ರಾಜಸ್ಥಾನದ ಕೋಟಾದಲ್ಲಿ ಕ್ರೆಡಿಟ್ ಔಟ್ರೀಚ್ ಕಾರ್ಯಕ್ರಮದಲ್ಲಿ ಐದು ಮೊಬೈಲ್ ಎಟಿಎಂ ವ್ಯಾನ್ ಗಳನ್ನು ಫ್ಲ್ಯಾಗ್ ಆಫ್ ಮಾಡಿದರು.