ನವದೆಹಲಿ: ಅಕ್ಟೋಬರ್ 1 ರಿಂದ ದೇಶಾದ್ಯಂತ ಹೊಸ ಕಾರ್ಮಿಕ ಕಾನೂನನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಇದಕ್ಕೆ ಮೊದಲು ಸರ್ಕಾರ ಕೆಲ ನಿಯಮಗಳಲ್ಲಿ ತಿದ್ದುಪಡಿ ಮಾಡಲಿದೆ.
ಏಪ್ರಿಲ್ 1 ರಿಂದಲೇ ಹೊಸ ಕಾನೂನು ಜಾರಿಗೆ ಬರಬೇಕಿತ್ತು. ಜುಲೈನಲ್ಲಿ ಜಾರಿಗೆ ಬರಲಿದೆ ಎನ್ನಲಾಗಿತ್ತು. ಆದರೆ, ಅಕ್ಟೋಬರ್ 1 ರಿಂದ ಜಾರಿಗೆ ತರಲು ನಿರ್ಧರಿಸಲಾಗಿದೆ. ಅಕ್ಟೋಬರ್ 1 ರಿಂದ ಸಂಬಳ ಪಡೆಯುವ ಉದ್ಯೋಗಿಗಳ ವೇತನ ರಚನೆಯಲ್ಲಿ ದೊಡ್ಡ ಬದಲಾವಣೆಯನ್ನು ಕಾಣಬಹುದು. ಉದ್ಯೋಗಿಗಳ ಟೇಕ್ ಹೋಮ್ ಸಂಬಳದಲ್ಲಿ ಇಳಿಕೆಯಾಗಲಿದೆ. ಹೊಸ ಕಾರ್ಮಿಕ ಸಂಹಿತೆಯಲ್ಲಿ ಕೆಲಸದ ಸಮಯ, ಅಧಿಕ ಸಮಯ, ವಿರಾಮದ ಸಮಯಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ಮಾಡಲಾಗುತ್ತಿದೆ.
29 ಕಾರ್ಮಿಕ ಕಾನೂನುಗಳನ್ನು ಸಂಯೋಜಿಸುವ ಮೂಲಕ ಸರ್ಕಾರವು 4 ಹೊಸ ವೇತನ ಕಾನೂನನ್ನು ಸಿದ್ಧಪಡಿಸಿದೆ. ನಾಲ್ಕು ಕೋಡ್ ಗಳು ಏಕ ಕಾಲದಲ್ಲಿ ಅನ್ವಯವಾಗಲಿವೆ. ವೇತನ ಸಂಹಿತೆ ಕಾಯಿದೆ 2019 ರ ಪ್ರಕಾರ, ಉದ್ಯೋಗಿಯ ಮೂಲ ವೇತನವು ಕಂಪನಿಯ ವೆಚ್ಚದ ಶೇಕಡ 50 ಕ್ಕಿಂತ ಕಡಿಮೆ ಇರಬಾರದು. ಅನೇಕ ಕಂಪನಿಗಳು ಮೂಲ ವೇತನವನ್ನು ಕಡಿಮೆ ನೀಡುತ್ತವೆ. ಭತ್ಯೆ ರೂಪದಲ್ಲಿ ಕಂಪನಿಗಳು ಹೆಚ್ಚಿನ ಹಣ ನೀಡುತ್ತವೆ.
ಹೊಸ ಕರಡು ಕಾನೂನಿನಲ್ಲಿ, ನಿಗದಿತ ಸಮಯಕ್ಕಿಂತ 15 ನಿಮಿಷ ಹೆಚ್ಚುವರಿ ಕೆಲಸ ಮಾಡಿದರೂ ಅದನ್ನು 30 ನಿಮಿಷಗಳ ಕೆಲಸಕ್ಕೆ ಸೇರಿಸಲಾಗುತ್ತದೆ. ಅದಕ್ಕೆ ಹೆಚ್ಚಿನ ಸಂಬಳ ನೀಡಲಾಗುತ್ತದೆ. ಪ್ರಸ್ತುತ ನಿಯಮದ ಪ್ರಕಾರ, 30 ನಿಮಿಷಗಳಿಗಿಂತ ಕಡಿಮೆ ಸಮಯವನ್ನು ಹೆಚ್ಚುವರಿ ಸಮಯಕ್ಕೆ ಅರ್ಹವೆಂದು ಪರಿಗಣಿಸಲಾಗುವುದಿಲ್ಲ. ಹೊಸ ಕಾನೂನಿನ ಪ್ರಕಾರ, ಉದ್ಯೋಗಿಯನ್ನು 5 ಗಂಟೆಗಳಿಗಿಂತ ಹೆಚ್ಚು ಕಾಲ ನಿರಂತರವಾಗಿ ಕೆಲಸ ಮಾಡುವಂತಿಲ್ಲ. ಪ್ರತಿ ಐದು ಗಂಟೆಗಳ ನಂತರ 30 ನಿಮಿಷಗಳ ವಿರಾಮವನ್ನು ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.