ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಲ್ಲಿ ನೌಕರರ ಭವಿಷ್ಯ ನಿಧಿಗೆ ವಾರ್ಷಿಕ 2.5 ಲಕ್ಷ ರೂಪಾಯಿಗಿಂತ ಹೆಚ್ಚಿನ ಕೊಡುಗೆ ಮೇಲಿನ ಬಡ್ಡಿಗೆ ತೆರಿಗೆ ವಿಧಿಸಲಾಗುವುದು.
ಏಪ್ರಿಲ್ 1 ರಿಂದ ಹೊಸ ಪಿಎಫ್ ತೆರಿಗೆ ನಿಯಮ ಜಾರಿಗೆ ಬರಲಿದೆ. 2.5 ಲಕ್ಷ ರೂಪಾಯಿವರೆಗೆ ಠೇವಣಿ ಮಿತಿಯಾಗಿ ಬಡ್ಡಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ನೌಕರರ ಮೂಲವೇತನ ಮತ್ತು ಕಾರ್ಯಕ್ಷಮತೆ ವೇತನದ ಕನಿಷ್ಠ ಶೇಕಡ 12 ರಷ್ಟು ಕಡ್ಡಾಯವಾಗಿ ಭವಿಷ್ಯ ನಿಧಿಗೆ ಪಾವತಿಯಾಗಲಿದ್ದು, ಉದ್ಯೋಗದಾತರು ಉಳಿದ ಶೇಕಡ 12ರಷ್ಟು ಕೊಡುಗೆ ನೀಡುತ್ತಾರೆ.
ಭವಿಷ್ಯ ನಿಧಿಯಲ್ಲಿ ತೆರಿಗೆ ಮುಕ್ತ ಬಡ್ಡಿ ಪಾವತಿ ಹೆಚ್ಚು ಸಮರ್ಥನೀಯವಲ್ಲದ ಕಾರಣ ಹೆಚ್ಚಿನ ಆದಾಯ ಗಳಿಸುವವರು ತಮ್ಮ ಪಿಎಫ್ ಖಾತೆಗಳಿಗೆ ಹೆಚ್ಚಿನ ಕೊಡುಗೆ ನೀಡುವುದನ್ನು ತಡೆಯಲು ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿದೆ.
ಕ್ಲಿಯರ್ ಟ್ಯಾಕ್ಸ್ ಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್ಕೆಟ್ ಗುಪ್ತಾ ಅವರ ಪ್ರಕಾರ, ಹೆಚ್ಚಿನ ಆದಾಯ ಗಳಿಸುವವರು ಮತ್ತು ಹೆಚ್ಚಿನ ವೇತನದವರ ಮೇಲೆ ಈ ನಿಯಮ ಪರಿಣಾಮ ಬೀರಲಿದೆ. ವಾರ್ಷಿಕ 20.83 ಲಕ್ಷ ರೂಪಾಯಿಗಿಂತ ಹೆಚ್ಚು ಗಳಿಕೆ, ಇಪಿಎಫ್ ಗೆ ದೊಡ್ಡ ಮೊತ್ತದ ಕೊಡುಗೆ ನೀಡುವವರಿಗೆ ತೆರಿಗೆ ಅನ್ವಯಿಸುತ್ತದೆ.
ಹೊಸ ನಿಬಂಧನೆ ನೌಕರರು ಕೊಡುಗೆಯನ್ನು ಮಾತ್ರ ಪರಿಗಣಿಸುತ್ತದೆ. ಯಾವುದೇ ವರ್ಷದಲ್ಲಿ ಭವಿಷ್ಯ ನಿಧಿಗೆ ಒಟ್ಟು ನೀಡಿದ ಒಟ್ಟು ಕೊಡುಗೆಯನ್ನು ಪರಿಗಣಿಸುವುದಿಲ್ಲ ಎಂದು ವಿಪಿಟಿಪಿ ಅಂಡ್ ಕಂಪನಿ ಪಾಲುದಾರ ಗೌರವ್ ಸರಾಫ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಸ್ತುತ ಇರುವ ತೆರಿಗೆ ನಿಬಂಧನೆಗಳ ಅಡಿಯಲ್ಲಿ ನೌಕರರ ಭವಿಷ್ಯ ನಿಧಿಯಿಂದ(ಇಪಿಎಫ್) ಪಡೆದ ಅಥವಾ ಗಳಿಸಿದ ಬಡ್ಡಿಯನ್ನು ತೆರಿಗೆಯಿಂದ ಮುಕ್ತಗೊಳಿಸಲಾಗಿದೆ. ವರ್ಷಕ್ಕೆ 2.5 ಲಕ್ಷ ರೂಪಾಯಿಗಿಂತ ಹೆಚ್ಚಿನ ಇಪಿಎಫ್ ಕೊಡುಗೆಗಳ ಮೇಲೆ(ನೌಕರರ ಕೊಡುಗೆ ಮಾತ್ರ) ಗಳಿಸಿದ ಬಡ್ಡಿಗೆ ತೆರಿಗೆ ವಿಧಿಸಲಾಗುವುದು. ಇದು ಹೆಚ್ಚಿನ ಆದಾಯದ ಉದ್ಯೋಗಿಗಳಲ್ಲಿ ಮೇಲೆ ಮಾತ್ರ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ.