
ನವದೆಹಲಿ: ಅಕ್ಟೋಬರ್ 1 ರಿಂದ ದೇಶದಲ್ಲಿ ಕಾರ್ಮಿಕ ಸಂಹಿತೆಯ ನಿಯಮಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.
ಈ ಕಾನೂನು ಜಾರಿಯಾದ ತಕ್ಷಣ, ಟೇಕ್ ಹೋಮ್ ಸಂಬಳ ಮತ್ತು ಉದ್ಯೋಗಿಗಳ ಪಿಎಫ್ ರಚನೆಯಲ್ಲಿ ಬದಲಾವಣೆಯಾಗಲಿದೆ. ಈ ಬದಲಾವಣೆಯು ಉದ್ಯೋಗಿಗಳ ಟೇಕ್ ಹೋಮ್ ಸಂಬಳವನ್ನು ಕಡಿಮೆ ಮಾಡಲಿದೆ ಆದರೆ, ಭವಿಷ್ಯ ನಿಧಿಯಲ್ಲಿ ಅಂದರೆ PF ನಲ್ಲಿ ಹೆಚ್ಚು ಹಣ ಸಂಗ್ರಹವಾಗಲು ಆರಂಭವಾಗಲಿದೆ.

ವಾಸ್ತವವಾಗಿ, ನಾಲ್ಕು ಕಾರ್ಮಿಕ ಕಾನೂನುಗಳನ್ನು ಆದಷ್ಟು ಬೇಗ ಜಾರಿಗೆ ತರಲು ಕೇಂದ್ರ ಸರ್ಕಾರ ಬಯಸಿದೆ. ಈ ಮೊದಲು ಜುಲೈ 1 ರಿಂದ ಕಾರ್ಮಿಕ ಸಂಹಿತೆಯ ನಿಯಮಗಳನ್ನು ಜಾರಿಗೆ ತರುವ ಯೋಜನೆ ಇತ್ತು. ಆದರೆ, ರಾಜ್ಯ ಸರ್ಕಾರಗಳು ಸಿದ್ಧವಿರಲಿಲ್ಲ. ಕೇಂದ್ರ ಮತ್ತು ರಾಜ್ಯಗಳು ಚರ್ಚಿಸಿದ ನಂತರದಲ್ಲಿ ಈ ಕಾನೂನುಗಳನ್ನು ಆಯಾ ರಾಜ್ಯಗಳಲ್ಲಿ ಜಾರಿಗೆ ತರಲಾಗುತ್ತದೆ. ಕಾರ್ಮಿಕ ಕಾನೂನುಗಳ ಅನುಷ್ಠಾನದ ನಂತರ, ಸಂಬಳ ರಚನೆಯಲ್ಲಿ ಹಲವು ಬದಲಾವಣೆಗಲಾಗಲಿವೆ.

ಹೊಸ ಕಾನೂನಿನೊಂದಿಗೆ, ನೌಕರರ ಮೂಲ ವೇತನ ಮತ್ತು ಭವಿಷ್ಯ ನಿಧಿಯನ್ನು ಲೆಕ್ಕಾಚಾರ ಮಾಡುವ ವಿಧಾನದಲ್ಲಿ ಗಮನಾರ್ಹ ಬದಲಾವಣೆ ಕಂಡುಬರಲಿದೆ. ಕಾರ್ಮಿಕ, ಕೈಗಾರಿಕಾ ಸಂಬಂಧಗಳು, ವೇತನಗಳು, ಸಾಮಾಜಿಕ ಭದ್ರತೆ, ಔದ್ಯೋಗಿಕ ಮತ್ತು ಆರೋಗ್ಯ ಭದ್ರತೆ ಮತ್ತು ಕೆಲಸದ ಪರಿಸ್ಥಿತಿಗಳ ಕುರಿತು ಹೊಸ ನಿಯಮವನ್ನು ಜಾರಿಗೆ ತರುವ ತಯಾರಿಯಲ್ಲಿ 44 ಕೇಂದ್ರ ಕಾರ್ಮಿಕ ಕಾನೂನುಗಳನ್ನು ನಾಲ್ಕು ಕಾರ್ಮಿಕ ಸಂಹಿತೆಗಳ ಅಡಿಯಲ್ಲಿ ಸಮನ್ವಯಗೊಳಿಸಲಾಗುವುದು.
ಬದಲಾವಣೆಯ ನಂತರ ನೌಕರರ ಮೂಲ ವೇತನವನ್ನು 15,000 ರೂ.ನಿಂದ 21,000 ರೂ.ಗೆ ಹೆಚ್ಚಿಸಬಹುದು. ಕಾರ್ಮಿಕರ ಕನಿಷ್ಠ ಮೂಲ ವೇತನವನ್ನು 15,000 ರಿಂದ 21,000 ರೂ.ಗೆ ಹೆಚ್ಚಿಸಬೇಕು ಎಂದು ಕಾರ್ಮಿಕ ಸಂಘವು ಒತ್ತಾಯಿಸುತ್ತಿದೆ. ಇದು ಜಾರಿಯಾದಲ್ಲಿ ಸಂಬಳ ಹೆಚ್ಚಾಗುತ್ತದೆ.

ಹೊಸ ವೇತನ ಸಂಹಿತೆಯ ಪ್ರಕಾರ, ಭತ್ಯೆಗಳನ್ನು ಶೇಕಡ 50 ಕ್ಕೆ ಮಿತಿಗೊಳಿಸಲಾಗುವುದು. ಇದರರ್ಥ ನೌಕರರ ಒಟ್ಟು ಸಂಬಳದ 50 ಪ್ರತಿಶತ ಮೂಲ ವೇತನವಾಗಿರುತ್ತದೆ. ಭವಿಷ್ಯ ನಿಧಿಯ ಲೆಕ್ಕಾಚಾರವನ್ನು ಮೂಲ ವೇತನದ ಶೇಕಡಾವಾರು ಆಧಾರದ ಮೇಲೆ ಮಾಡಲಾಗುತ್ತದೆ. ಇದು ಮೂಲ ವೇತನ ಮತ್ತು ಭತ್ಯೆಯನ್ನು ಒಳಗೊಂಡಿದೆ.

ಪ್ರಸ್ತುತ, ಉದ್ಯೋಗದಾತರು ಸಂಬಳವನ್ನು ಹಲವಾರು ವಿಧದ ಭತ್ಯೆಗಳಾಗಿ ವಿಂಗಡಿಸುತ್ತಾರೆ. ಇದು ಮೂಲ ವೇತನವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಭವಿಷ್ಯ ನಿಧಿ ಮತ್ತು ಆದಾಯ ತೆರಿಗೆಗೆ ಕೊಡುಗೆ ಕಡಿಮೆಯಾಗುತ್ತದೆ. ವೇತನ ಸಂಹಿತೆಯಲ್ಲಿ ಭವಿಷ್ಯ ನಿಧಿಯ ಕೊಡುಗೆಯನ್ನು ಒಟ್ಟು ಸಂಬಳದ 50 ಶೇಕಡಾ ದರದಲ್ಲಿ ನಿಗದಿಪಡಿಸಲಾಗುತ್ತದೆ.


ಏನು ಪ್ರಯೋಜನ?
ಹೊಸ ಬದಲಾವಣೆಗಳ ನಂತರ, ಮೂಲ ವೇತನವು 50 ಪ್ರತಿಶತ ಅಥವಾ ಹೆಚ್ಚಿನದಾಗಿರಬಹುದು. ಮತ್ತೊಂದೆಡೆ, ಪಿಎಫ್ ಅನ್ನು ಮೂಲ ವೇತನದ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ, ಆದ್ದರಿಂದ ಈಗ ಕಂಪನಿ ಮತ್ತು ಉದ್ಯೋಗಿ ಇಬ್ಬರ ಕೊಡುಗೆ ಹೆಚ್ಚಾಗುತ್ತದೆ. ಗ್ರಾಚ್ಯುಟಿ ಮತ್ತು ಪಿಎಫ್‌ಗೆ ಕೊಡುಗೆ ಹೆಚ್ಚಾಗುವುದರೊಂದಿಗೆ, ನಿವೃತ್ತಿಯ ನಂತರ ಪಡೆದ ಮೊತ್ತವು ಹೆಚ್ಚಾಗುತ್ತದೆ.

ಪಿಎಫ್ ನಲ್ಲಿ ಉದ್ಯೋಗಿಗಳ ಕೊಡುಗೆಯನ್ನು ಹೆಚ್ಚಿಸುವುದರಿಂದ ಕಂಪನಿಗಳ ಮೇಲೆ ಆರ್ಥಿಕ ಹೊರೆ ಹೆಚ್ಚಾಗುತ್ತದೆ. ಇದರೊಂದಿಗೆ, ಮೂಲ ವೇತನದ ಹೆಚ್ಚಳದಿಂದಾಗಿ ಗ್ರ್ಯಾಚುಟಿ ಪ್ರಮಾಣವು ಮೊದಲಿಗಿಂತಲೂ ಹೆಚ್ಚಿರುತ್ತದೆ, ಮೊದಲಿಗಿಂತ ಒಂದೂವರೆ ಪಟ್ಟು ಹೆಚ್ಚಾಗಬಹುದು. ಈ ವಿಷಯಗಳು ಖಾಸಗಿ ಕಂಪನಿಗಳ ಬ್ಯಾಲೆನ್ಸ್ ಶೀಟ್‌ನ ಮೇಲೂ ಪರಿಣಾಮ ಬೀರುತ್ತವೆ.