ಬ್ಯಾಂಕ್ ಗ್ರಾಹಕರಿಗೆ ವಂಚಕರಿಂದ ನಕಲಿ ಕರೆಗಳು ಬರುತ್ತಿರುವ ಕುರಿತಂತೆ ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡುವ ಮೂಲಕ ಎಚ್ಚರಿಕೆ ನೀಡಿದೆ. ಇಂತಹ ಕರೆಗಳನ್ನು ನಂಬಿ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯ ವಿವರ ನೀಡಿದರೆ ಕ್ಷಣಾರ್ಧದಲ್ಲಿಯೇ ಖಾತೆ ಖಾಲಿಯಾಗುವುದು ಗ್ಯಾರಂಟಿ ಎಂದು ಎಚ್ಚರಿಸಲಾಗಿದೆ.
ಕೆವೈಸಿ ಹೆಸರಿನಲ್ಲಿ ವಂಚಕರು ಗ್ರಾಹಕರಿಗೆ ಕರೆಗಳನ್ನು ಮಾಡುತ್ತಿದ್ದು, ಖಾತೆಯ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಬಳಿಕ ಅವರಿಗೆ ಅರಿವಿಲ್ಲದಂತೆ ಖಾತೆಯಲ್ಲಿರುವ ಹಣವನ್ನು ವರ್ಗಾಯಿಸಿಕೊಳ್ಳುತ್ತಿದ್ದಾರೆ. ಇಂತಹುದೇ ಒಂದು ಪ್ರಕರಣದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರೊಬ್ಬರು ಬರೋಬ್ಬರಿ 2.07 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.
ಈ ಗ್ರಾಹಕರಿಗೆ ಮೊದಲು ಕರೆ ಮಾಡಿದ ವಂಚಕ, ಕೆವೈಸಿ ಸಲುವಾಗಿ ಮಾಹಿತಿ ಕೇಳಿದ್ದಾನೆ. ಆ ಬಳಿಕ ಅಕೌಂಟ್ ವೆರಿಫಿಕೇಷನ್ ಗೆಂದು 10 ರೂಪಾಯಿಗಳನ್ನು ಅವರ ಖಾತೆಗೆ ವರ್ಗಾಯಿಸಿದ್ದು, ಇದನ್ನು ನೆಟ್ ಬ್ಯಾಂಕಿಂಗ್ ಮೂಲಕ ಮರಳಿಸುವಂತೆ ತಿಳಿಸಿದ್ದಾನೆ. ಈ ವೇಳೆ ಗ್ರಾಹಕರ ಖಾತೆಯಿಂದ 1.35 ಲಕ್ಷ ರೂಪಾಯಿ ವಂಚಕನ ಖಾತೆಗೆ ವರ್ಗಾಯಿಸಿಕೊಳ್ಳಲಾಗಿದೆ. ಇದರ ಅರಿವು ಗ್ರಾಹಕರಿಗೆ ಆಗಿಲ್ಲ. ಆಗ ವಂಚಕ ಡೆಬಿಟ್ ಕಾರ್ಡ್ ಮೂಲಕ 10 ರೂ. ಮರಳಿಸುವಂತೆ ತಿಳಿಸಿದ್ದು, ಈ ಸಂದರ್ಭದಲ್ಲಿ ಮತ್ತೆ 72 ಸಾವಿರ ರೂಪಾಯಿಗಳನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಹೀಗೆ ವಂಚಕನ ಮಾತು ನಂಬಿದ ಗ್ರಾಹಕರು ಒಟ್ಟು 2.07 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.