ಬೆಂಗಳೂರು: ಕರ್ನಾಟಕ ಮಾರುಕಟ್ಟೆ ಪ್ರವೇಶಿಸಲು ಮುಂದಾಗಿರುವ ಗುಜರಾತ್ ರಾಜ್ಯದ ಅಮುಲ್ ವಿರುದ್ಧ ರಾಜ್ಯಾದ್ಯಂತ ಭಾರಿ ವಿರೋಧ ವ್ಯಕ್ತವಾಗಿದೆ.
ರಾಜ್ಯದ ಜನಮನ ಗೆದ್ದ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಬಳಸಬೇಕು. ರೈತರನ್ನು ಬೆಂಬಲಿಸಬೇಕು ಎಂಬ ಅಭಿಯಾನ ಕೈಗೊಳ್ಳಲಾಗಿದೆ. ಅಮುಲ್ –ಕೆಎಂಎಫ್ ವಿಲೀನಕ್ಕೆ ಹುನ್ನಾರ ನಡೆದಿದೆ ಎಂದು ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇದೇ ವೇಳೆ ಅಮುಲ್ ಗೆ ಹಿನ್ನಡೆಯಾಗಿ ರಾಜ್ಯದ ರೈತರನ್ನು ಬೆಂಬಲಿಸಲು ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಬಳಸಲು ಹೋಟೆಲ್ ಮಾಲೀಕರು ನಿರ್ಧಾರ ಕೈಗೊಂಡಿದ್ದಾರೆ. ರಾಜ್ಯದ ರೈತರು ಉತ್ಪಾದಿಸುವ ನಮ್ಮ ಹೆಮ್ಮೆಯ ನಂದಿನಿ ಹಾಲನ್ನೇ ಬಳಸುವ ಮೂಲಕ ನಾವೆಲ್ಲರೂ ಕೆಎಂಎಫ್ ಪ್ರೋತ್ಸಾಹಿಸಬೇಕು ಎಂದು ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಮನವಿ ಮಾಡಿದೆ.
ಅನ್ಯ ರಾಜ್ಯಗಳ ಹಾಲು ಕರ್ನಾಟಕಕ್ಕೆ ಲಗ್ಗೆ ಇಡುತ್ತಿದ್ದು, ಶುಚಿ ಮತ್ತು ರುಚಿಯಾದ ಕಾಫಿ, ತಿಂಡಿಗಳು ಸಿಗಲು ಬಹುಕಾಲದಿಂದ ಜೊತೆಯಾಗಿರುವ ನಂದಿನಿ ಹಾಲನ್ನೇ ಪ್ರಮುಖವಾಗಿ ಬಳಸುತ್ತಿದ್ದು, ಇನ್ನು ಮುಂದೆಯೂ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಬಳಸಲಾಗುವುದು ಎಂದು ಹೋಟೆಲ್ ಗಳ ಸಂಘದ ಅಧ್ಯಕ್ಷ ಪಿ.ಸಿ. ರಾವ್ ತಿಳಿಸಿದ್ದಾರೆ.