ಬೆಳಗಾವಿ: ಹಳ್ಳ, ಕೊಳ್ಳಗಳಲ್ಲಿ ಸಿಗುವ ಮರಳನ್ನು ಬಡವರಿಗೆ ಉಚಿತವಾಗಿ ವಿತರಿಸಲು ಸರ್ಕಾರ ಮುಂದಾಗಿದೆ. ಬೆಳಗಾವಿಯಲ್ಲಿ ಮಾತನಾಡಿದ ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವ ಮುರುಗೇಶ್ ನಿರಾಣಿ ಬಗ್ಗೆ ಮಾಹಿತಿ ನೀಡಿ, ಹಳ್ಳಕೊಳ್ಳಗಳಲ್ಲಿ ನೈಸರ್ಗಿಕ ತಾಣಗಳಲ್ಲಿ ಸಿಗುವ ಮರಳನ್ನು ರಾಜ್ಯದ ಬಡವರಿಗೆ ಉಚಿತವಾಗಿ ಹಂಚಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಸ್ಥಳೀಯವಾಗಿ ಲಭ್ಯವಿರುವ ಮರಳನ್ನು ಜನರಿಗೆ ಉಚಿತವಾಗಿ ವಿತರಿಸುವ ಕುರಿತು ಚರ್ಚೆ ನಡೆದಿದೆ. 5 ವಿಧದಲ್ಲಿ ಮರಳನ್ನು ವಿಂಗಡಿಸಲಾಗಿದ್ದು, ರಾಜ್ಯದ ಐದು ವಿಭಾಗಗಳಲ್ಲಿ 15 ದಿನಕ್ಕೊಮ್ಮೆ ಅದಾಲತ್ ನಡೆಸಿ ಸಮಸ್ಯೆಗಳನ್ನು ನಿವಾರಿಸಲಾಗುವುದು ಎಂದು ಹೇಳಿದ್ದಾರೆ.
ಸುರಕ್ಷಿತ ಗಣಿಗಾರಿಕೆಗೆ ಆದ್ಯತೆ ನೀಡಲು ರಾಜ್ಯದಲ್ಲಿ ಗಣಿಗಾರಿಕೆ ವಿಶ್ವವಿದ್ಯಾಲಯ ಸ್ಥಾಪನೆಗೆ ಚಿಂತನೆ ನಡೆದಿದೆ. ಮರಳು, ಕಲ್ಲು ಸೇರಿದಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ವ್ಯಾಪ್ತಿಗೆ ಒಳಪಡುವ ವಿವಿಧ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಲಾಗುವುದು. ಬೇಡಿಕೆ ಮತ್ತು ಪೂರೈಕೆದಾರ ನಡುವೆ ಸಂಪರ್ಕ ಸಾಧಿಸಲು ಸ್ಟೋನ್ ಪಾರ್ಕ್ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.