ನವದೆಹಲಿ: 4 ವರ್ಷಗಳಿಂದ ಏಷ್ಯಾದ ನಂಬರ್ ಒನ್ ಮತ್ತು 14 ವರ್ಷಗಳಿಂದ ಭಾರತದ ನಂಬರ್ ಒನ್ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ 100 ಶತಕೋಟಿ ಡಾಲರ್(7.54 ಲಕ್ಷ ಕೋಟಿ) ಆಸ್ತಿ ಹೊಂದಿದ ಶ್ರೀಮಂತರ ಕ್ಲಬ್ ಸೇರಿದ್ದಾರೆ. ಈ ಮೂಲಕ ವಿಶ್ವದ 11 ನೇ ಶ್ರೀಮಂತ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಅಮೆಜಾನ್ ನ ಜೆಫ್ ಬೆಜೋಸ್, ಟೆಸ್ಲಾ ದ ಎಲಾನ್ ಮಸ್ಕ್, ಆರ್ನಾಲ್ಡ್, ಬಿಲ್ ಘೇಟ್ಸ್, ಲ್ಯಾರಿ ಪೇಜ್, ಜುಕರ್ ಬರ್ಗ್ ಸೇರಿದಂತೆ ಶತಕೋಟಿ ಡಾಲರ್ ಸಂಪತ್ತು ಹೊಂದಿದವರ ಕ್ಲಬ್ ಗೆ ಅಂಬಾನಿ ಸೇರ್ಪಡೆಯಾಗಿದ್ದಾರೆ.
ಶತಕೋಟಿ ಡಾಲರ್ ಶ್ರೀಮಂತರ ಪಟ್ಟಿಗೆ ಸೇರಿದ 11 ನೇ ವ್ಯಕ್ತಿ ಮುಕೇಶ್ ಅಂಬಾನಿ. ಶುಕ್ರವಾರ ರಿಲಯನ್ಸ್ ಷೇರು ಮೌಲ್ಯ ಏರಿಕೆಯ ಪರಿಣಾಮ ಅವರ ಸಂಪತ್ತು ವೃದ್ಧಿಸಿದೆ. ಅಂಬಾನಿ ಆಸ್ತಿ ವರ್ಷದಲ್ಲಿ 1.76 ಲಕ್ಷ ಕೋಟಿ ರೂ. ನಷ್ಟು ಹೆಚ್ಚಳವಾಗಿದೆ. ಬ್ಲೂಂಬರ್ಗ್ ಬಿಲಿಯನೇರ್ ಇಂಡೆಕ್ಸ್ ವರದಿ ಪ್ರಕಾರ, ವಿಶ್ವದ ಆಗರ್ಭ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಅಂಬಾನಿ 11 ನೇ ಸ್ಥಾನದಲ್ಲಿದ್ದಾರೆ.