ಬೆಂಗಳೂರು: ರಾಜ್ಯದ ಇ-ಕಾಮರ್ಸ್ ರಫ್ತು ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಇ-ಕಾಮರ್ಸ್ ದಿಗ್ಗಜ ಅಮೆಜಾನ್ ಜತೆಗಿನ ಒಪ್ಪಂದಕ್ಕೆ ಕರ್ನಾಟಕ ಸರ್ಕಾರ ಸಹಿ ಹಾಕಿದೆ.
ಕರ್ನಾಟಕ ಉದ್ಯೋಗ ಮಿತ್ರದ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ವೇಳೆ ಮಾತನಾಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಜಗದೀಶ ಶೆಟ್ಟರ್, ಉತ್ಪಾದನೆ ಮತ್ತು ಆವಿಷ್ಕಾರ ಕ್ಷೇತ್ರದಲ್ಲಿ ರಾಜ್ಯದ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸುವ ಪ್ರಯತ್ನವಾಗಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ತಿಳಿಸಿದ್ದಾರೆ.
ನೂತನ ಕೈಗಾರಿಕಾ ನೀತಿ 2020-25 ರಾಜ್ಯದ ಸಮಗ್ರ ಅಭಿವೃದ್ಧಿ ಹಾಗೂ ಬೆಂಗಳೂರಿನಿಂದ ಹೊರಗೆ ಕೈಗಾರಿಕೆಗಳನ್ನು ಟಯರ್-2 ಹಾಗೂ ಟಯರ್-3 ನಗರಗಳಲ್ಲಿ ವಿಸ್ತರಿಸುವುದು ನಮ್ಮ ಉದ್ದೇಶ. ಆಟೋಮೊಬೈಲ್, ಕೃಷಿ, ಏರೋಸ್ಪೇಸ್, ಜವಳಿ, ಬಯೋಟೆಕ್, ಆಟಿಕೆಗಳು /ಕರಕುಶಲ ವಲಯದಂಥ ಹಲವಾರು ಸೂಕ್ಷ್ಮ, ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಕರ್ನಾಟಕ ನೆಲೆಯಾಗಿದೆ. ಜಾಗತಿಕ ಮಟ್ಟದಲ್ಲಿ ವಿಸ್ತೃತ ಜಾಲ ಹೊಂದಿರುವ ಅಮೆಜಾನ್ ಜತೆಗಿನ ಈ ಒಪ್ಪಂದದಿಂದ ನಮ್ಮ ರಾಜ್ಯದ ಎಂಎಸ್‌ಎಂಇಗಳಿಗೆ ಉತ್ತೇಜನ ದೊರೆಯಲಿದೆ. ಸ್ಥಳೀಯವಾಗಿ ತಯಾರಾದ ಉತ್ಪನ್ನಗಳು ವಿಶ್ವದ ಯಾವುದೇ ಭಾಗದಲ್ಲಿರುವ ಗ್ರಾಹಕರನ್ನು ತಲುಪಲು ಇದರಿಂದ ನೆರವಾಗಲಿದೆ ಎಂದು ತಿಳಿಸಿದ್ದಾರೆ.
ಹೊಸ ಕೈಗಾರಿಕಾ ನೀತಿ ಹಾಗೂ ಕೈಗಾರಿಕಾ ಸೌಲಭ್ಯ ಅಧಿನಿಯಮದ ತಿದ್ದುಪಡಿಯಿಂದ ಉದ್ಯಮ ಸ್ನೇಹಿ ವಾತಾವರಣ ಸೃಷ್ಟಿಯಾಗಿದೆ. ಸುಲಲಿತ ವ್ಯವಹಾರಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅಫಿಡವಿಟ್ ಬೇಸ್ಡ್ ಕ್ಲಿಯರೆನ್ಸ್(ಎಬಿಸಿ) ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸಾರ್ಥಕ್’ ಕಾರ್ಯಕ್ರಮದಡಿ ಸಮಗ್ರ ವೇದಿಕೆ ಮತ್ತು ಸೆಂಟರ್ ಆಫ್ ಎಕ್ಸಲೆನ್ಸ್‌ಅನ್ನು ಪರಿಚಯಿಸಲಾಗಿದೆ. ಕಚ್ಚಾ ವಸ್ತು ಪೂರೈಕೆದಾರರು, ಗುಣಮಟ್ಟ ಮತ್ತು ಪ್ರಮಾಣೀಕರಣದ ಜತೆಗೆ ಸುಲಭ ಸಾಲ ಸೌಲಭ್ಯಕ್ಕೆ ಅನುವು ಮಾಡಿಕೊಡುವುದು ಈ ವೇದಿಕೆಯ ಉದ್ದೇಶ ಎಂದು ಹೇಳಿದ್ದಾರೆ.
ಒಪ್ಪಂದ ಏಕೆ..?
ಕೋವಿಡ್‌ನಿಂದ ಅತಿ ಹೆಚ್ಚು ಹಾನಿಗೊಳಗಾದ ವಲಯಗಳಲ್ಲಿ ಒಂದಾದ ಸೂಕ್ಷ್ಮ, ಸಣ್ಣ, ಮಧ್ಯಮ ಕೈಗಾರಿಕೆಗಳ ಚೇತರಿಕೆಗೆ ಈ ಒಪ್ಪಂದ ನೆರವಾಗಲಿದೆ. ಅದರಂತೆ, ಬಳ್ಳಾರಿ, ಮೈಸೂರು, ಚನ್ನಪಟ್ಟಣ ಮುಂತಾದ ಪ್ರಮುಖ ಎಂಎಸ್‌ಎಂಇ ಕ್ಲಸ್ಟರ್‌ಗಳಲ್ಲಿ ಉದ್ಯಮಿಗಳಿಗೆ ಅಮೆಜಾನ್ ತರಬೇತಿ, ಕಾರ್ಯಾಗಾರಗಳನ್ನು ನಡೆಸಲಿದೆ. ವಿಶ್ವಾದ್ಯಂತ 30 ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿರುವ ಅಮೆಜಾನ್ ಬಿ2ಸಿ (ಉದ್ಯಮದಿಂದ ಗ್ರಾಹಕರಿಗೆ), ಇ-ಕಾಮರ್ಸ್ ರಫ್ತಿನ ಬಗ್ಗೆ ಅರಿವು ಮೂಡಿಸಲಿದೆ. ಇದರಿಂದ ತಮ್ಮದೇ ಬ್ರ್ಯಾಂಡ್ ಆರಂಭಿಸಿ ಅಮೆಜಾನ್ ಗ್ಲೋಬಲ್ ಸೆಲ್ಲಿಂಗ್ ಮೂಲಕ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ವಹಿವಾಟು ನಡೆಸಬಹುದು.
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಮಾತನಾಡಿ, ಕೋವಿಡ್ ಸಮಯದಲ್ಲಿ ಪರಿಚಯಿಸಿದ ಹೊಸ ಕೈಗಾರಿಕಾ ನೀತಿಯಿಂದ 20 ಲಕ್ಷ ಉದ್ಯೋಗ ಸೃಷ್ಟಿ ಆಗಲಿದೆ. ಪ್ರಸಕ್ತ ಸನ್ನಿವೇಶದಲ್ಲಿ ಲಾಜಿಸ್ಟಿಕ್ ಆದ್ಯತಾ ವಲಯವಾಗಿದೆ. ಇ-ಕಾಮರ್ಸ್ ವಲಯದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಯಾದರೆ ಹೆಚ್ಚಿನ ಜನರಿಗೆ ಅನುಕೂಲವಾಗುವುದು ಎಂದು ಹೇಳಿದ್ದಾರೆ.
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಮಾತನಾಡಿ, ಅಮೆಜಾನ್‌ನಲ್ಲಿ ಮಾರಾಟ ಮಾಡುವ ರಾಜ್ಯದ ಮಾರಾಟಗಾರರ ಪೈಕಿ ಶೇ. 50 ಕ್ಕೂ ಹೆಚ್ಚಿನವರು 2-3ನೇ ಹಂತದ ನಗರದವರು. ಬೆಂಗಳೂರಿನ ಆಚೆಗೆ ಉದ್ಯಮಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಸರ್ಕಾರ ಇಟ್ಟಿರುವ ಈ ಹೆಜ್ಜೆ ಮಹತ್ವವಾದುದು ಎಂದು ತಿಳಿಸಿದ್ದಾರೆ.
ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ರೇವಣ್ಣಗೌಡ, ವಿಶ್ವೇಶ್ವರಯ್ಯ ಟ್ರೇಡ್ ಪ್ರಮೋಷನ್ ಸೆಂಟರ್‌ನ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಪಾಲ್ಗೊಂಡಿದ್ದರು.