ಮುಂಬೈ ಆ್ಯಪಲ್ ಸ್ಟೋರ್ ಗೆ ಆರಂಭದ ದಿನವೇ 6,000ಕ್ಕೂ ಹೆಚ್ಚು ಮಂದಿ ಭೇಟಿ ನೀಡಿದ್ದಾರೆ. ನಿನ್ನೆ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಲ್ಲಿರುವ ಮುಂಬೈನ ಜಿಯೋ ವರ್ಲ್ಡ್ ಡ್ರೈವ್ ಮಾಲ್‌ನಲ್ಲಿ ಐಫೋನ್ ತಯಾರಕ ಭಾರತದಲ್ಲಿ ತನ್ನ ಮೊದಲ ಆಪಲ್ ಸ್ಟೋರ್ ಅನ್ನು ಆರಂಭಿಸಿದೆ.
ಆಪಲ್ ಸಿಇಒ ಟಿಮ್ ಕುಕ್ ಅವರು ಮಳಿಗೆಯನ್ನು ಉದ್ಘಾಟಿಸಿದರು. ನಟಿ ಮಾಧುರಿ ದೀಕ್ಷಿತ್ ಮತ್ತು ಸಂಗೀತಗಾರ ಎ.ಆರ್. ರೆಹಮಾನ್ ಮೊದಲಾದವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಪ್ರಾರಂಭದ ದಿನದಂದು ಭಾರತದಲ್ಲಿ ಆಪಲ್ ನ ಮೊದಲ ಸ್ವಯಂ-ಮಾಲೀಕತ್ವದ ಚಿಲ್ಲರೆ ಅಂಗಡಿಗೆ 6000 ಕ್ಕೂ ಹೆಚ್ಚು ಜನರು ಸಾಲಿನಲ್ಲಿ ಕಾಯುತ್ತಿದ್ದರು.
ಒಂದೇ ದಿನದಲ್ಲಿ 6,000 ಜನರು ಭೇಟಿ ನೀಡಿದ್ದು, ಬಹಳ ದೊಡ್ಡ ವ್ಯವಹಾರವಾಗಿದೆ. ಇದು ಭಾನುವಾರ, ರಜಾದಿನ ಅಥವಾ ಕೊಡುಗೆಯ ದಿನವಲ್ಲ. ಆದರೂ ದೇಶದಲ್ಲಿ ಮೊದಲ ಬಾರಿಗೆ ಆಪಲ್ ಸ್ಟೋರ್ ಆರಂಭವಾಗಿರುವುದು ಗ್ರಾಹಕರನ್ನು ಸೆಳೆದಿದೆ.
ಆಪಲ್ ಭಾರತದಲ್ಲಿ ತನ್ನ ಎರಡನೇ ಮಳಿಗೆಯನ್ನು ಏಪ್ರಿಲ್ 19 ರಂದು ದೆಹಲಿಯ ಸೆಲೆಕ್ಟ್ ಸಿಟಿವಾಕ್ ಮಾಲ್ ನಲ್ಲಿ ತೆರೆಯಲು ಸಿದ್ಧವಾಗಿದೆ. ಶಾಪಿಂಗ್ ಸೆಂಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ(SCAI) ಯ ಅಂದಾಜಿನ ಪ್ರಕಾರ, ಮಾಲ್ ವಾರದ ದಿನಗಳಲ್ಲಿ ಸರಾಸರಿ 12000 ರಿಂದ 14000 ಸಂದರ್ಶಕರು, ಮತ್ತು ವಾರಾಂತ್ಯದಲ್ಲಿ ಸರಾಸರಿ 22000 ರಿಂದ 25000 ಸಂದರ್ಶಕರು ಭೇಟಿ ನೀಡಲಿದ್ದಾರೆ ಎಂದು ರಾಷ್ಟ್ರವ್ಯಾಪಿ ಎಲೆಕ್ಟ್ರಾನಿಕ್ಸ್ ಚಿಲ್ಲರೆ ಸರಪಳಿಯ ಮಾಲೀಕರು ಹೇಳಿದ್ದಾರೆ.