ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಿರುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ(ಪಿಎಂಯುವೈ) ಅಡಿಯಲ್ಲಿ ಪ್ರತಿ ಎಲ್‌ಪಿಜಿ ಸಿಲಿಂಡರ್ ಸಬ್ಸಿಡಿಯನ್ನು ಸರ್ಕಾರ ಶುಕ್ರವಾರ ಒಂದು ವರ್ಷಕ್ಕೆ ವಿಸ್ತರಿಸಿದೆ. ಈ ಕ್ರಮದಿಂದ 9.6 ಕೋಟಿ ಕುಟುಂಬಗಳಿಗೆ ಅನುಕೂಲವಾಗಲಿದೆ. ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು PMUY ನ ಫಲಾನುಭವಿಗಳಿಗೆ ವರ್ಷಕ್ಕೆ 12 ರೀಫಿಲ್‌ಗಳಿಗೆ 14.2 ಕೆಜಿ ಸಿಲಿಂಡರ್‌ಗೆ 200 ರೂ ಸಬ್ಸಿಡಿ ನೀಡಲು ಅನುಮೋದಿಸಿದೆ ಎಂದು I&B ಸಚಿವ ಅನುರಾಗ್ ಠಾಕೂರ್ ಸುದ್ದಿಗಾರರಿಗೆ ತಿಳಿಸಿದರು.
ಮಾರ್ಚ್ 1, 2023 ರ ಹೊತ್ತಿಗೆ, 9.59 ಕೋಟಿ PMUY ಫಲಾನುಭವಿಗಳಿದ್ದಾರೆ. ಇದಲ್ಲದೆ, 2022-23 ರ ಆರ್ಥಿಕ ವರ್ಷಕ್ಕೆ 6,100 ಕೋಟಿ ರೂಪಾಯಿ ಮತ್ತು 2023-24 ಕ್ಕೆ 7,680 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಸಚಿವರು ಹೇಳಿದರು.
ಸಹಾಯಧನವನ್ನು ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ವಿವಿಧ ಭೌಗೋಳಿಕ ರಾಜಕೀಯ ಕಾರಣಗಳಿಂದಾಗಿ ಎಲ್‌ಪಿಜಿಯ ಅಂತರರಾಷ್ಟ್ರೀಯ ಬೆಲೆಗಳಲ್ಲಿ ತೀವ್ರ ಏರಿಕೆ ಕಂಡುಬಂದಿದೆ ಮತ್ತು ಪಿಎಂಯುವೈ ಫಲಾನುಭವಿಗಳನ್ನು ಹೆಚ್ಚಿನ ಎಲ್‌ಪಿಜಿ ಬೆಲೆಗಳಿಂದ ರಕ್ಷಿಸುವುದು ಮುಖ್ಯವಾಗಿದೆ ಎಂದು ಠಾಕೂರ್ ಹೇಳಿದರು.