ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಸಿಕ 3000 ರೂ. ನೀಡುವ ಯೋಜನೆ ಘೋಷಿಸಿದ್ದು, ಇದಕ್ಕಾಗಿ 45 ಲಕ್ಷ ಜನರನ್ನು ನೋಂದಾಯಿಸಲಾಗಿದೆ.
ಪ್ರಧಾನಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆಯಡಿ ಬಡವರು ಮತ್ತು ವೃದ್ಧರಿಗೆ ಅನುಕೂಲವಾಗುವಂತೆ 2019 ರಲ್ಲಿ ಯೋಜನೆ ಆರಂಭಿಸಲಾಗಿದ್ದು, ಇದೇ ಮಾರ್ಚ್ 4, 2021 ರವರೆಗೆ 44.90 ಲಕ್ಷ ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ.
60 ವರ್ಷ ತುಂಬಿದ ಕಾರ್ಮಿಕರಿಗೆ ಪ್ರತಿ ತಿಂಗಳು ಕನಿಷ್ಠ 3000 ರೂಪಾಯಿ ಪಿಂಚಣಿ ನೀಡಲಾಗುವುದು. 18 ರಿಂದ 40 ವರ್ಷ ವಯಸ್ಸಿನ ಮಾಸಿಕ 15 ಸಾವಿರ ರೂ. ಆದಾಯ ಮಿತಿ ಹೊಂದಿದವರು ಯೋಜನೆಗೆ ನೊಂದಾಯಿಸಬಹುದು.
ಪ್ರಧಾನಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆಯಡಿ ಪ್ರತಿ ತಿಂಗಳು 55 ರಿಂದ 200 ರೂಪಾಯಿ ಹೂಡಿಕೆ ಮಾಡಬಹುದು. 18 ವರ್ಷ ವಯಸ್ಸಿನವರು ತಿಂಗಳಿಗೆ 55 ರೂ., 30 ವರ್ಷ ವಯಸ್ಸಿನವರು ತಿಂಗಳಿಗೆ 100 ರೂ., 40 ವರ್ಷದವರು ತಿಂಗಳಿಗೆ 200 ಪಾವತಿಸಬೇಕಿದೆ.
18 ವರ್ಷ ವಯಸ್ಸಿನ ವ್ಯಕ್ತಿ ಯೋಜನೆಗೆ ನೋಂದಾಯಿಸಿಕೊಂಡರೆ ವರ್ಷದಲ್ಲಿ 660 ರೂ. ಠೇವಣಿ ಇಡಬೇಕಾಗುತ್ತದೆ. 60 ವರ್ಷ ವಯಸ್ಸಿನವರೆಗೆ 27,720 ರೂ. ಇಡಲಿದ್ದು, 42 ವರ್ಷಗಳ ಕಾಲ ಹಣವನ್ನು ಹೂಡಿಕೆ ಮಾಡಿದರೆ 60 ನೇ ವರ್ಷದ ನಂತರ ಪ್ರತಿ ತಿಂಗಳು 3000 ರೂ. ಪಿಂಚಣಿ ಪಡೆಯಬಹುದು.
ಯೋಜನೆಯ ನೋಂದಣಿಗಾಗಿ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಮಾಹಿತಿ, ಪಾಸ್ ಬುಕ್ ಗಳೊಂದಿಗೆ ಸಾಮಾನ್ಯ ಸೇವಾ ಕೇಂದ್ರಕ್ಕೆ ಹೋಗಿ ಖಾತೆ ತೆರೆಯಬೇಕಿದೆ. ಖಾತೆ ತೆರೆದ ನಂತರ ಕಾರ್ಮಿಕರಿಗೆ ಶ್ರಮಯೋಗಿ ಕಾರ್ಡ್ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 1800 267 6888 ಸಂಪರ್ಕಿಸಬಹುದಾಗಿದೆ.