ನವದೆಹಲಿ: ಕೋವಿಡ್ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿದ ಬೀದಿ ಬದಿ ವ್ಯಾಪಾರಸ್ಥರಿಗೆ ನೆರವು ನೀಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿಶೇಷ ಮೈಕ್ರೋ ಕ್ರೆಡಿಟ್ ಸಾಲ ಸೌಲಭ್ಯ ಕಲ್ಪಿಸಿದೆ.
ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ಬೀದಿ ವ್ಯಾಪಾರಸ್ಥರಿಗೆ ಆತ್ಮ ನಿರ್ಭರ ನಿಧಿ ಮಂಜೂರು ಮಾಡಿದೆ. ಈ ಯೋಜನೆಯಡಿ ಸರ್ಕಾರಕ್ಕೆ 27,33,497 ಅರ್ಜಿಗಳು ಬಂದಿವೆ. ಇದರಲ್ಲಿ 14,34,436 ಅರ್ಜಿಗೆ ಮಂಜೂರಾತಿ ಸಿಕ್ಕಿದ್ದು, 7,88,438 ಅರ್ಜಿದಾರರಿಗೆ ಸಾಲ ವಿತರಿಸಲಾಗಿದೆ ಎಂದು ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸ್ಥಳೀಯ ಸಂಸ್ಥೆಗಳ ನೆರವಿನಿಂದ ಜನರ ಮನೆ ಬಾಗಿಲಿಗೆ ತೆರಳಿ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸಲು ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಲು ಒತ್ತು ನೀಡಲಾಗಿದೆ. ಅಲ್ಲದೇ, ವೆಬ್ ಪೋರ್ಟಲ್, ಮೊಬೈಲ್ ಅಪ್ಲಿಕೇಷನ್ ಮೂಲಕ ನಿರ್ವಹಣೆಗೆ ವ್ಯವಸ್ಥೆ ಮಾಡಲಾಗಿದೆ. ಡಿಜಿಟಲ್ ವಹಿವಾಟನ್ನು ಕೂಡ ಪ್ರೋತ್ಸಾಹಿಸಲಾಗ್ತಿದೆ. ಸುಲಭವಾಗಿ ಸಾಲ ಪಡೆಯಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ.
ಯೋಜನೆಯ ಅನುಷ್ಠಾನದಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಕೋವಿಡ್ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ ಬೀದಿ ಬದಿ ವ್ಯಾಪಾರಿಗಳು, ಸಣ್ಣ ಮಾರಾಟಗಾರರಿಗೆ ಈ ಸಾಲ ಯೋಜನೆಯಿಂದ ಅನುಕೂಲವಾಗಿದೆ ಎಂದು ಹೇಳಲಾಗಿದೆ.