ನವದೆಹಲಿ: ಮೊಬೈಲ್ ಬಳಕೆದಾರರಿಗೆ ಪೋಸ್ಟ್ ಪೇಯ್ಡ್ ನಿಂದ ಪ್ರಿಪೇಯ್ಡ್ ಗೆ ಶೀಘ್ರದಲ್ಲೇ ಬದಲಾವಣೆ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗುತ್ತಿದೆ. ಒಟಿಪಿ ಬಳಸಿಕೊಂಡು ಈ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.
ಒಟಿಪಿ ಆಧಾರಿತ ದೃಢೀಕರಣ ಬಳಸುವ ಮೂಲಕ ಸಿಮ್ ಕಾರ್ಡ್ ಬದಲಾವಣೆ ಮಾಡುವ ಅಗತ್ಯವಿಲ್ಲದೆ ಮೊಬೈಲ್ ಫೋನ್ ಚಂದಾದಾರರು ಪೋಸ್ಟ್ ಪೇಯ್ಡ್ ನಿಂದ ಪ್ರಿಪೇಯ್ಡ್ ಗೆ ಬದಲಾಯಿಸಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ಹೇಳಲಾಗಿದೆ.
ಇಂಡಸ್ಟ್ರಿ ಬಾಡಿ ಸೆಲ್ಯುಲಾರ್ ಆಪರೇಟರ್ಸ್ ಅಸೋಸಸಿಯೇಷನ್ ಅಫ್ ಇಂಡಿಯಾ (COAI) ದೂರಸಂಪರ್ಕ ಇಲಾಖೆಗೆ ಯಾಂತ್ರಿಕೃತ ವ್ಯವಸ್ಥೆಯ ಬಗ್ಗೆ ಪ್ರಸ್ತಾವನೆ ಸಲ್ಲಿಸಿದೆ. ಟೆಲಿಕಾಂ ಆಪರೇಟರ್ ಗಳಿಗೆ ಪಿಒಸಿ ನಿರ್ವಹಿಸಲು ಇಲಾಖೆ ತಿಳಿಸಿದೆ. ಖಾತೆಯ ಬದಲಾವಣೆಗೆ ಅವಕಾಶ ನೀಡುವ ಅಂತಿಮ ನಿರ್ಧಾರವು ಪಿಒಸಿಯ ಫಲಿತಾಂಶವನ್ನು ಅವಲಂಬಿಸಿರುತ್ತದೆ ಎಂದು ಡಿಒಟಿ ಟಿಪ್ಪಣಿ ತಿಳಿಸಿದೆ.
ಡಿಒಟಿ ಎಡಿಜಿ ಸುರೇಶ್ ಕುಮಾರ್ ಬಿಡುಗಡೆ ಮಾಡಿರುವ ಟಿಪ್ಪಣಿಯಲ್ಲಿ, ಪ್ರಿಪೇಯ್ಡ್ ನಿಂದ ಪೋಸ್ಟ್ ಪೇಯ್ಡ್ ಗೆ ಪರಿವರ್ತನೆಗಾಗಿ ಟೆಲಿಕಾಂ ಸೇವಾ ಪೂರೈಕೆದಾರರ ಕಾರ್ಯವಿಧಾನ ಪ್ರಕಾರ ಕ್ರಮ ಕೈಗೊಳ್ಳಬಹುದು ಎಂದು ಹೇಳಲಾಗಿದೆ.
ಮೊಬೈಲ್ ಗ್ರಾಹಕರಿಗೆ ಪ್ರಿಪೇಯ್ಡ್ ನಿಂದ ಪೋಸ್ಟ್ ಪೇಯ್ಡ್ ಗೆ ವಲಸೆ ಹೋಗಲು ಅನುಮತಿ ನೀಡುವಂತೆ ಮತ್ತು ಹೊಸ ಕೆವೈಸಿ ಕಾರ್ಯವಿಧಾನಗಳನ್ನು ಕೈಗೊಳ್ಳದೇ, ಒಟಿಪಿ (ಒಂದು ಬಾರಿ ಪಾಸ್ವರ್ಡ್) ಆಧಾರಿತ ದೃಢೀಕರಣ ನೀಡುವಂತೆ ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾವನ್ನು ಒಳಗೊಂಡಿರುವ ಸಿಒಎಐ ಮನವಿ ಮಾಡಿದ್ದವು.
ಎಲ್ಲಾ ಕ್ಷೇತ್ರಗಳಲ್ಲಿಯೂ ಇತ್ತೀಚೆಗೆ ಒಟಿಪಿ ಆಧಾರಿತ ದೃಢೀಕರಣ ಸ್ವೀಕಾರಾರ್ಹವಾಗಿವೆ. ಹೆಚ್ಚಿನ ನಾಗರಿಕ ಕೇಂದ್ರಿತ ಸೇವೆಗಳನ್ನು ಒಟಿಪಿ ದೃಢೀಕರಣದೊಂದಿಗೆ ನೀಡಲಾಗುತ್ತಿದೆ. ಗ್ರಾಹಕರ ಅನುಕೂಲಕ್ಕಾಗಿ ಮತ್ತು ವ್ಯವಹಾರ ಸುಲಭಗೊಳಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ.
ಪ್ರಸ್ತಾವಿತ ಟಿಪ್ಪಣಿಯ ಅನ್ವಯ ಮೊಬೈಲ್ ಚಂದಾದಾರರು ತಮ್ಮ ಅಸ್ತಿತ್ವದಲ್ಲಿರುವ ಮೊಬೈಲ್ ಸಂಪರ್ಕವನ್ನು ಪ್ರೀಪೇಯ್ಡ್ ನಿಂದ ಪೋಸ್ಟ್ ಪೇಯ್ಡ್ ಬದಲಿಸಿಕೊಳ್ಳಲು ತಮ್ಮ ಸೇವಾ ಪೂರೈಕೆದಾರರಿಗೆ ಎಸ್ಎಂಎಸ್, ಐವಿಆರ್ ಎಸ್, ವೆಬ್ಸೈಟ್ ಅಥವಾ ಅಧಿಕೃತ ಅಪ್ಲಿಕೇಶನ್ ಮೂಲಕ ವಿನಂತಿಯನ್ನು ಕಳಿಸಬೇಕು. ವಿನಂತಿ ಸ್ವೀಕರಿಸಿದ ನಂತರ ಚಂದಾದಾರರು ಮೊಬೈಲ್ ಖಾತೆಯನ್ನು ಪರಿವರ್ತಿಸುವ ವಿನಂತಿಯನ್ನು ಅಂಗೀಕರಿಸುವ ಸಂದೇಶ ಪಡೆಯಲಿದ್ದಾರೆ. ಅವರಿಗೆ ಕಳಿಸಿದ ಒಟಿಪಿ 10 ನಿಮಿಷಗಳವರೆಗೆ ಮಾನ್ಯವಾಗಿರುತ್ತದೆ. ಯಶಸ್ವಿ ಪರಿಶೀಲನೆಯ ನಂತರ ಒಟಿಪಿಯನ್ನು ಚಂದದಾರರ ಒಪ್ಪಿಗೆಯಾಗಿ ಪರಿಗಣಿಸಲಾಗುತ್ತದೆ. ಈ ಪರಿವರ್ತನೆಯ ಸಮಯದಲ್ಲಿ ಸೇವೆಗಳ ಅಡ್ಡಿ 30 ನಿಮಿಷಗಳನ್ನು ಮೀರಿರಬಾರದು. ಅಷ್ಟರೊಳಗೆ ವ್ಯವಸ್ಥೆ ಮಾಡಿಕೊಡಬೇಕೆಂದು ಹೇಳಲಾಗಿದೆ.
ಪ್ರಸ್ತುತ ಶೇಕಡ 90 ರಷ್ಟು ಮೊಬೈಲ್ ಚಂದದಾರರು ಪ್ರಿಪೇಯ್ಡ್ ಸೇವೆಯನ್ನು ಬಳಸುತ್ತಿದ್ದಾರೆ. ಉದ್ದೇಶಿತ ಸೌಲಭ್ಯದಡಿಯಲ್ಲಿ, ಮೊಬೈಲ್ ಸಂಪರ್ಕದ ಮಾಲೀಕತ್ವದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಮತ್ತು ಸಿಮ್ ಕಾರ್ಡ್ ಗ್ರಾಹಕರ ಬಳಿಯೇ ಇರುತ್ತದೆ ಎನ್ನಲಾಗಿದೆ.